ಧ್ರುವ ಹೆಲಿಕಾಪ್ಟರ್ ಅಪಘಾತಗಳ ಪೈಕಿ ಮೂರಕ್ಕೆ ನಾವು ಜವಾಬ್ದಾರರಲ್ಲ: ಎಚ್ಎಎಲ್ ಮುಖ್ಯಸ್ಥ

PC : NDTV
ಬೆಂಗಳೂರು: 2023ರಿಂದ ಇಲ್ಲಿಯವರೆಗೆ ಭಾರತೀಯ ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆಯಲ್ಲಿ ನಡೆದಿರುವ ನಾಲ್ಕು ಧ್ರುವ ಹೆಲಿಕಾಪ್ಟರ್ ಅಪಘಾತಗಳ ಪೈಕಿ ಮೂರು ಹೆಲಿಕಾಪ್ಟರ್ ಅಪಘಾತಗಳು ಯಾವುದೇ ಬಗೆಯ ತಯಾರಿಕಾ ದೋಷ ಅಥವಾ ವಿನ್ಯಾಸ ದೋಷದಿಂದ ಸಂಭವಿಸಿಲ್ಲ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ.ಸುನೀಲ್ ಸ್ಪಷ್ಟಪಡಿಸಿದ್ದಾರೆ.
ಸಶಸ್ತ್ರ ಪಡೆಗಳ ಬಹು ಮುಖ್ಯ ಕಾರ್ಯಶಕ್ತಿಯಾದ ಧ್ರುವ್ ಹೆಲಿಕಾಪ್ಟರ್ ಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಅಪಘಾತಕ್ಕೀಡಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತ ತನಿಖೆ ಬಾಕಿ ಇರುವಾಗಲೇ ಧ್ರುವ್ ಹೆಲಿಕಾಪ್ಟರ್ ಪದೇ ಪದೇ ಭೂಸ್ಪರ್ಶ ಮಾಡಿದೆ. 2023ರಿಂದ ಇಲ್ಲಿಯವರೆಗೆ ಧ್ರುವ್ ಹೆಲಿಕಾಪ್ಟರ್ ಗಳು ಮೂರು ಬಾರಿ ಭೂಸ್ಪರ್ಶ ಮಾಡಿವೆ. ಸಶಸ್ತ್ರ ಪಡೆಗಳಲ್ಲಿ ಅಂದಾಜು 338 ಧ್ರುವ್ ಹೆಲಿಕಾಪ್ಟರ್ ಗಳು ಸೇವೆಯಲ್ಲಿವೆ. ಈ ಪೈಕಿ ಭಾರತೀಯ ವಾಯು ಪಡೆ ಹಾಗೂ ಭಾರತೀಯ ಸೇನೆಯ ಧ್ರುವ್ ಹೆಲಿಕಾಪ್ಟರ್ ಗಳ ಹಾರಾಟಕ್ಕೆ ಹಸಿರು ನಿಶಾನೆ ತೋರಲಾಗಿದೆ.
ಈ ಕುರಿತು NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಿ.ಕೆ.ಸುನೀಲ್, “ನಾಲ್ಕು ಧ್ರುವ್ ಹೆಲಿಕಾಪ್ಟರ್ ಅಪಘಾತಗಳ ಪೈಕಿ ಮೂರು ಅಪಘಾತಗಳು ಕರಾವಳಿ ಕಾವಲು ಪಡೆ ಹಾಗೂ ಒಂದು ಅಪಘಾತ ನೌಕಾಪಡೆಯಲ್ಲಿ ಸಂಭವಿಸಿದ್ದು, ಇದು ಬೇರೆಯದೇ ಕಾರಣಕ್ಕಾಗಿದೆ. ಇದು ತಯಾರಿಕೆಗಾಗಲಿ ಅಥವಾ ವಿನ್ಯಾಸಕ್ಕಾಗಲಿ ಸಂಬಂಧಿಸಿದ್ದಲ್ಲ. ಬಹುಶಃ ನಿರ್ವಹಣೆ ಅಥವಾ ಕಾರ್ಯಾಚರಣೆಯ ಸಮಸ್ಯೆ ಇದರಲ್ಲಿರಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಇತ್ತೀಚೆಗೆ ಜನವರಿ 5, 2025ರಂದು ಸಂಭವಿಸಿದ್ದ ಕರಾವಳಿ ಕಾವಲು ಪಡೆ ಕಾರ್ಯಾಚರಿಸುವ ಧ್ರುವ್ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಮುಖ ಬಿಡಿ ಭಾಗವಾದ Non-Rotating Swashplate Bearing (NRSB)ನಲ್ಲಿ ಬಿರುಕು ಕಂಡು ಬಂದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ.ಸುನೀಲ್, “ಇತ್ತೀಚೆಗೆ ಸಂಭವಿಸಿದ ಕರಾವಳಿ ಕಾವಲು ಪಡೆಯ ಧ್ರುವ್ ಹೆಲಿಕಾಪ್ಟರ್ ನ ನಾನ್ ರೊಟೇಟಿಂಗ್ ಸ್ವಾಶ್ ಪ್ಲೇಟ್ ಬೇರಿಂಗ್ ನಲ್ಲಿ ಬಿರುಕು ಕಂಡು ಬಂದಿದೆ. ಈ ದೋಷದ ಕುರಿತು ತನಿಖಾ ಸಮಿತಿಯು ಪರಿಶೀಲನೆ ನಡೆಸಿದೆ. ನಮಗೆ ತುಂಬಾ ವಿಶಿಷ್ಟವಾದ ವ್ಯತ್ಯಾಸ ಕಂಡು ಬಂದಿತು. ಸೇನಾ ಪಡೆ ಹಾಗೂ ವಾಯು ಪಡೆ ಹೆಲಿಕಾಪ್ಟರ್ ಗಳಲ್ಲಿ ಇಂತಹ ದೋಷ ಕಂಡು ಬಂದಿಲ್ಲ. ಹೀಗಾಗಿ, ನಾವು ಅವನ್ನು ಅನುಮೋದಿಸಿದೆವು. ಅವು ಈಗ ಹಾರಾಟ ನಡೆಸುತ್ತಿವೆ” ಎಂದು ಹೇಳಿದ್ದಾರೆ.
ಧ್ರುವ್ ಹೆಲಿಕಾಪ್ಟರ್ ಸುಧಾರಿತ ಲಘು ಹೆಲಿಕಾಪ್ಟರ್ ಆಗಿದ್ದು, ಮಹತ್ವಾಕಾಂಕ್ಷಿ ಸ್ವದೇಶಿ ನಿರ್ಮಿತವಾಗಿದೆ. ಈ ಹೆಲಿಕಾಪ್ಟರ್ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದ್ದು, 2024-25ರ ನಡುವೆ ಸರಣಿ ಅಪಘಾತಕ್ಕೆ ಗುರಿಯಾಗಿದೆ. ನಿರ್ದಿಷ್ಟವಾಗಿ, ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆ ಕಾರ್ಯಾಚರಿಸುವ ಧ್ರುವ್ ಹೆಲಿಕಾಪ್ಟರ್ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿವೆ.







