ಪಶ್ಚಿಮ ಬಂಗಾಳಕ್ಕೆ ‘ಬಾಂಗ್ಲಾ’ಎಂದು ಮರುನಾಮಕರಣಕ್ಕೆ ಟಿಎಂಸಿ ಆಗ್ರಹ

ಸಾಂದರ್ಭಿಕ ಚಿತ್ರ | ANI
ಹೊಸದಿಲ್ಲಿ : ಪಶ್ಚಿಮ ಬಂಗಾಳಕ್ಕೆ ‘ಬಾಂಗ್ಲಾ’ ಎಂದು ಮರುನಾಮಕರಣ ಮಾಡುವಂತೆ ಮಂಗಳವಾರ ಆಗ್ರಹಿಸಿರುವ ಟಿಎಂಸಿ, ಅದು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಟಿಎಂಸಿ ಸಂಸದ ರಿತಬ್ರತ ಬ್ಯಾನರ್ಜಿಯವರು, ಪಶ್ಚಿಮ ಬಂಗಾಳ ವಿಧಾನಸಭೆಯು ಜುಲೈ 2018ರಲ್ಲಿ ರಾಜ್ಯದ ಮರುನಾಮಕರಣಕ್ಕಾಗಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತ್ತು. ಆದರೆ ಕೇಂದ್ರವು ಇನ್ನೂ ಅದನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದರು.
‘ಮರುನಾಮಕರಣವು ನಮ್ಮ ರಾಜ್ಯದ ಇತಿಹಾಸ,ಸಂಸ್ಕೃತಿ ಮತ್ತು ಅನನ್ಯತೆಗೆ ಅನುಗುಣವಾಗಿರುತ್ತದೆ ಮತ್ತು ನಮ್ಮ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು ಎಂದರು.
1947ರ ವಿಭಜನೆಯಿಂದಾಗಿ ಬಂಗಾಳವು ಪಶ್ಚಿಮ ಬಂಗಾಳ ಮತ್ತು ಪೂರ್ವ ಪಾಕಿಸ್ತಾನವಾಗಿ ವಿಭಜಿಸಲ್ಪಟ್ಟಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನವು ಸ್ವಾತಂತ್ಯ್ರವನ್ನು ಘೋಷಿಸಿದ್ದು,ನೂತನ ದೇಶ ಬಾಂಗ್ಲಾದೇಶ ರೂಪುಗೊಂಡಿತ್ತು.
ಇಂದು ಪೂರ್ವ ಪಾಕಿಸ್ತಾನ ಎನ್ನುವುದೇ ಇಲ್ಲ ಎಂದ ಬ್ಯಾನರ್ಜಿ,‘ನಮ್ಮ ರಾಜ್ಯದ ಹೆಸರನ್ನು ಬದಲಿಸುವ ಅಗತ್ಯವಿದೆ. ಪಶ್ಚಿಮ ಬಂಗಾಳದ ಜನತೆಯ ಆಶಯವನ್ನು ಗೌರವಿಸಬೇಕಿದೆ ’ ಎಂದು ಹೇಳಿದರು.
2011ರಲ್ಲಿ ಒರಿಶಾವನ್ನು ಒಡಿಶಾ ಎಂದು ಮರುನಾಮಕರಣ ಮಾಡಲಾಗಿದ್ದು,ಅದರ ನಂತರ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಲಾಗಿಲ್ಲ.