ಪಶ್ಚಿಮ ಬಂಗಾಳ | ವಜಾಹತ್ ಖಾನ್ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ, 6 ದಿನ ಪೊಲೀಸ್ ಕಸ್ಟಡಿ

ವಜಾಹತ್ ಖಾನ್ , ಶರ್ಮಿಷ್ಠಾ ಪನೋಲಿ | PC: X \ KhelaHobePart2
ಕೋಲ್ಕತ್ತಾ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ವಿರುದ್ಧ ದೂರು ನೀಡಿ, ಆಕೆಯ ಬಂಧನಕ್ಕೆ ಕಾರಣವಾಗಿದ್ದ ವಜಾಹತ್ ಖಾನ್ಗೆ ದ್ವೇಷ ಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪಕ್ಕೆ ಸಂಬಂಧಿಸಿ ಜಾಮೀನು ನೀಡಲು ಕೋಲ್ಕತ್ತಾದ ಸ್ಥಳೀಯ ನ್ಯಾಯಲಯವೊಂದು ನಿರಾಕರಿಸಿದೆ. ಅವರನ್ನು 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೂಲಕ ದ್ವೇಷ ಭಾಷಣ ಹರಡುತ್ತಿರುವ ಹಾಗೂ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಆರೋಪದಲ್ಲಿ ವಜಾಹತ್ ಖಾನ್ ವಿರುದ್ಧ ಕೋಲ್ಕತ್ತಾದ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಜಾಹತ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಆತನ ಗಾರ್ಡನ್ ರೀಚ್ ನಿವಾಸಕ್ಕೆ ಪೊಲೀಸರು ಮೂರು ಬಾರಿ ನೋಟಿಸ್ ರವಾನಿಸಿದ್ದರು. ಆದರೆ, ಆತ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮಂಗಳವಾರ ಆತನನ್ನು ಬಂಧಿಸಲಾಗಿತ್ತು.
ಶರ್ಮಿಷ್ಠಾ ಪನೋಲಿಯ ಬಂಧನದ ನಂತರ, ವಜಾಹತ್ ಖಾನ್ ನಾಪತ್ತೆಯಾಗಿದ್ದಾನೆ, ಆತ ಮನೆಗೆ ಮರಳಿಲ್ಲ, ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಶರ್ಮಿಷ್ಠಾ ತಂದೆ ಸಾದತ್ ಖಾನ್ ಆರೋಪಿಸಿದ್ದರು.
ಈ ನಡುವೆ ವಜಾಹತ್ ಖಾನ್ ವಿರುದ್ಧ ಶ್ರೀರಾಮ್ ಸ್ವಾಭಿಮಾನ್ ಪರಿಷದ್ ಕೋಲ್ಕತ್ತಾ ಪೊಲೀಸರಿಗೆ ದೂರು ನೀಡಿತ್ತು. ದೂರಿನಲ್ಲಿ, ಹಿಂದೂ ದೇವತೆಗಳು, ಧಾರ್ಮಿಕ ಸಂಪ್ರದಾಯಗಳು ಹಾಗೂ ಇಡೀ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ವಜಾಹತ್ ಖಾನ್ ಅವಹೇಳನಕಾರಿ, ಪ್ರಚೋದನಾಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದಕ್ಕೂ ಮುನ್ನ ವಜಾಹತ್ ಖಾನ್ ನೀಡಿ ನೀಡಿದ್ದ ದೂರನ್ನು ಆಧರಿಸಿ, ಮೇ 30ರಂದು ಶರ್ಮಿಷ್ಠಾ ಪನೋಲಿಯನ್ನು ಗುರುಗ್ರಾಮದಿಂದ ಬಂಧಿಸಲಾಗಿತ್ತು.