ಪಶ್ಚಿಮ ಬಂಗಾಳ |ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಸಹಪಾಠಿಯಿಂದ ಅತ್ಯಾಚಾರ

ಸಾಂದರ್ಭಿಕ ಚಿತ್ರ | Photo Credi : freepik.com
ಕೋಲ್ಕತಾ, ಅ. 15: ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿ ಅತ್ಯಾಚಾರ ಎಸಗಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಪಶ್ಚಿಮಬಂಗಾಳದ ದುರ್ಗಾಪುರದಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಎಸಗಿದ ಕುರಿತಂತೆ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅತ್ಯಾಚಾರ ಆರೋಪಿಯಾಗಿರುವ ಆಕೆಯ ಸಹಪಾಠಿಯನ್ನು ಆನಂದಪುರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಯುವತಿ ಶಿಕ್ಷಣ ಪಡೆಯಲು ರಾಜ್ಯಕ್ಕೆ ಬಂದಿದ್ದಾಳೆ. ಆಕೆಗೆ ಆಕೆಯ ಸಹಪಾಠಿ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ನೀಡಿದ್ದಾನೆ. ಪ್ರಜ್ಞೆ ಕಳೆದುಕೊಂಡ ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅನಂತರ ಆಕೆ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಎಂಜಿನಿಯರಿಂಗ್ ವಿದ್ಯಾರ್ಥಿನಿ ಎಲ್ಲಿಯವಳು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಆರೋಪಿ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ. ಆತ ಆನಂದಪುರದ ಮನೆಗೆ ಹಿಂದಿರುಗಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಗರ ನ್ಯಾಯಾಲಯ ಆತನನ್ನು ಅಕ್ಟೋಬರ್ 22ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
‘‘ನಾವು ತನಿಖೆ ಆರಂಭಿಸಿದ್ದೇವೆ. ಏನು ಸಂಭವಿಸಿದೆ ಎಂಬ ಬಗ್ಗೆ ವಿವರಗಳನ್ನು ಶೀಘ್ರದಲ್ಲಿ ಬಹಿರಂಗಪಡಿಸಲಿದ್ದೇವೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





