ಪಶ್ಚಿಮ ಬಂಗಾಳ: ಇನ್ನೋರ್ವ ಬಿಎಲ್ಒ ಆತ್ಮಹತ್ಯೆ

ಮಮತಾ ಬ್ಯಾನರ್ಜಿ |Photo Credit : PTI
ಕೋಲ್ಕತಾ,ನ.22: ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್ಒ) ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಕೆಲಸದ ಹೊರೆಯಿಂದಾಗಿ ರಿಂಕು ತರಫ್ದಾರ್ ಅಪಾರ ಒತ್ತಡಕ್ಕೆ ಸಿಲುಕಿದ್ದರು ಎಂದು ಅವರ ಕುಟುಂಬವು ಆರೋಪಿಸಿದೆ ಎಂದು ತಿಳಿಸಿದ ಪೋಲಿಸ್ ಅಧಿಕಾರಿಯೋರ್ವರು,ಅವರ ಕೊಠಡಿಯಲ್ಲಿ ಲಿಖಿತ ಚೀಟಿಯೊಂದು ಪತ್ತೆಯಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳಿದರು.
ಪ್ರಸ್ತುತ ಎಸ್ಐಆರ್ ನಡೆಯುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ.ಬಂಗಾಳ ಒಂದಾಗಿದೆ.
ಎಸ್ಐಆರ್ ಸಂದರ್ಭದಲ್ಲಿ ದೇಶಾದ್ಯಂತ ನಾಲ್ವರು ಬಿಎಲ್ಒಗಳ ಶಂಕಿತ ಆತ್ಮಹತ್ಯೆಗಳು ವರದಿಯಾಗಿವೆ.
ತರಫ್ದಾರ್ ಆತ್ಮಹತ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಆಘಾತವನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು,‘ರಿಂಕು ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿರುವ ಚೀಟಿಯಲ್ಲಿ ಚುನಾವಣಾ ಆಯೋಗವನ್ನು ದೂಷಿಸಿದ್ದಾರೆ. ಈ ಎಸ್ಐಆರ್ಗಾಗಿ ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕು?’ಎಂದು ಪ್ರಶ್ನಿಸಿದ್ದಾರೆ. ಅವರು ತನ್ನ ಪೋಸ್ಟ್ನಲ್ಲಿ ಆತ್ಮಹತ್ಯೆ ಪತ್ರದ ಪ್ರತಿಯನ್ನೂ ಲಗತ್ತಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಇನ್ನೋರ್ವ ಬಿಎಲ್ಒ ಜಲಪೈಗುರಿ ಜಿಲ್ಲೆಯ ಮಾಲ್ ಬ್ಲಾಕ್ ನಿವಾಸಿ ಶಾಂತಿ ಮುನಿ ಎಕ್ಕಾ ತನ್ನ ಮನೆಯ ಹೊರಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಎಸ್ಐಆರ್ಗಾಗಿ ಮನೆ ಮನೆ ಭೇಟಿಯಿಂದಾಗಿ ಅತಿಯಾದ ಕೆಲಸದ ಹೊರೆಯನ್ನು ಎದುರಿಸುತ್ತಿದ್ದರು ಎಂದು ಎಕ್ಕಾ ಕುಟುಂಬವೂ ಆರೋಪಿಸಿತ್ತು.
ರಾಜ್ಯದಲ್ಲಿ ಎಸ್ಐಆರ್ ಪ್ರಕಟಿಸಿದ ಬಳಿಕ 28 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಭೀತಿ ಮತ್ತು ಅನಿಶ್ಚಿತತೆಯಿಂದ, ಉಳಿದವರು ಒತ್ತಡ ಮತ್ತು ಅತಿಯಾದ ಕೆಲಸದ ಹೊರೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎಂದು ಆಗ ಮಮತಾ ಹೇಳಿದ್ದರು.
ಭಾರತೀಯ ಚುನಾವಣಾ ಆಯೋಗದ ಪೂರ್ವಯೋಜಿತಲ್ಲದ, ನಿರಂತರ ಕೆಲಸದ ಹೊರೆಯಿಂದಾಗಿ ಇಂತಹ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಹಿಂದೆ ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತಿದ್ದ ಎಸ್ಐಆರ್ ಪ್ರಕ್ರಿಯೆಯನ್ನು ಈಗ ರಾಜಕೀಯ ಧಣಿಗಳನ್ನು ಮೆಚ್ಚಿಸಲು ಚುನಾವಣೆಗೆ ಮುನ್ನ ಕೇವಲ ಎರಡು ತಿಂಗಳುಗಳಿರುವಾಗ ಬಲವಂತದಿಂದ ಮಾಡಿಸಲಾಗುತ್ತಿದೆ,ತನ್ಮೂಲಕ ಬಿಎಲ್ಒಗಳ ಮೇಲೆ ಅಮಾನವೀಯ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದ ಮಮತಾ, ಆತ್ಮಸಾಕ್ಷಿಯೊಂದಿಗೆ ನಡೆದುಕೊಳ್ಳುವಂತೆ ಮತ್ತು ಎಸ್ಐಆರ್ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.







