ಪಶ್ಚಿಮ ಬಂಗಾಳ | NRCಯೇ SIRನ ನೈಜ ಉದ್ದೇಶ: ಮಮತಾ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ, ನ. 26: ಸ್ವಾತಂತ್ರ್ಯ ಸಿಕ್ಕಿ ಎಷ್ಟೋ ವರ್ಷಗಳು ಗತಿಸಿದ ಬಳಿಕ ಜನರ ಪೌರತ್ವವನ್ನು ಪ್ರಶ್ನಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ. ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಹಿಂದಿನ ನಿಜವಾದ ಉದ್ದೇಶ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯೇ ಆಗಿದೆ ಎಂದು ಅವರು ಹೇಳಿದರು.
ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತದ ಕೆಂಪು ರಸ್ತೆಯಲ್ಲಿರುವ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
‘‘ಪ್ರಜಾಪ್ರಭುತ್ವ ಅಪಾಯದಲ್ಲಿರುವಾಗ, ಜಾತ್ಯತೀತತೆ ವಿನಾಶದ ಸುಳಿಯಲ್ಲಿ ಸಿಲುಕಿರುವಾಗ ಮತ್ತು ಒಕ್ಕೂಟ ವ್ಯವಸ್ಥೆಗೆ ಕೊಡಲಿ ಏಟು ಬೀಳುತ್ತಿರುವಾಗ ಜನರು ಸಂವಿಧಾನದ ರಕ್ಷಣೆಗೆ ಮುಂದಾಗಬೇಕು’’ ಎಂದು ಮುಖ್ಯಮಂತ್ರಿ ಹೇಳಿದರು.
ಸಂವಿಧಾನವು ಭಾರತದ ಬೆನ್ನೆಲುಬಾಗಿದೆ ಎಂದು ಹೇಳಿದ ಅವರು, ಅದು ಭಾರತದ ಸಂಸ್ಕೃತಿಗಳು, ಭಾಷೆಗಳು ಮತ್ತು ಸಮುದಾಯಗಳ ವೈವಿಧ್ಯತೆಯನ್ನು ಪರಿಪೂರ್ಣವಾಗಿ ಜೊತೆಗೆ ಬೆಸೆದಿದೆ ಎಂದರು.
‘‘ಇಂದು, ಸಂವಿಧಾನ ದಿನದಂದು, ಭಾರತದಲ್ಲಿರುವ ನಮ್ಮನ್ನು ಒಗ್ಗೂಡಿಸಿರುವ ನಮ್ಮ ಶ್ರೇಷ್ಠ ಸಂವಿಧಾನಕ್ಕೆ ನಾನು ಮಹೋನ್ನತ ಗೌರವ ನೀಡುತ್ತಿದ್ದೇನೆ. ಇಂಥ ಶ್ರೇಷ್ಠ ಸಂವಿಧಾನವನ್ನು ರೂಪಿಸಿರುವ ದೂರದೃಷ್ಟಿಯ ನಾಯಕರಿಗೆ, ಅದರಲ್ಲೂ ಮುಖ್ಯವಾಗಿ ಅದರ ಪ್ರಧಾನ ರೂವಾರಿ ಡಾ. ಬಿ.ಆರ್. ಅಂಬೇಡ್ಕರ್ರಿಗೆ ನಾನಿಂದು ಗೌರವ ಸಲ್ಲಿಸುತ್ತೇನೆ’’ ಎಂದು ಬಳಿಕ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.







