ಪಶ್ಚಿಮ ಬಂಗಾಳ | ಬಿಎಲ್ಒ ಸಾವು; ಎಸ್ಐಆರ್ ಕೆಲಸದ ಒತ್ತಡದ ಆರೋಪ

ಸಾಂದರ್ಭಿಕ ಚಿತ್ರ | Photo Credit ; PTI
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬರು ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯ ಕೆಲಸದ ಹೊರೆ ಹಾಗೂ ಒತ್ತಡ ಅವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.
ಇದರೊಂದಿಗೆ ಕಳೆದ ವರ್ಷ ನವೆಂಬರ್ನಿಂದ ಇಂದಿನ ವರೆಗೆ ಸಾವನ್ನಪ್ಪಿದ ಬಿಎಲ್ಒಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ನವೆಂಬರ್ 4ರಿಂದ ಆರಂಭವಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕೆಲಸದ ಹೊರೆ ಹಾಗೂ ತೀವ್ರ ಒತ್ತಡಕ್ಕೆ ಅವರು ಬಲಿಯಾಗಿದ್ದಾರೆ ಮೃತರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಮಾಲ್ಡಾ ಜಿಲ್ಲೆಯ ಇಂಗ್ಲೀಷ್ ಬಝಾರ್ ಪ್ರದೇಶದ ಪಕುರ್ತಲಾದ ಐಸಿಡಿಎಸ್ ಕಾರ್ಯಕರ್ತರಾದ ಸಂಪ್ರಿತಾ ಚೌಧುರಿ ಬುಧವಾರ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾರೆ.
‘‘ಕೆಲವು ದಿನಗಳ ಹಿಂದೆ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಐಸಿಡಿಎಸ್ ಕಾರ್ಯಕರ್ತೆಯಾಗಿ ದೈನಂದಿನ ಕರ್ತವ್ಯದ ಹೊರತಾಗಿ, ಅವರನ್ನು ವಿಶೇಷ ತೀವ್ರ ಪರಿಷ್ಕರಣೆಯ ಕೆಲಸಕ್ಕೆ ಬೂತ್ ಮಟ್ಟದ ಅಧಿಕಾರಿಯಾಗಿ ಕೂಡ ನಿಯೋಜಿಸಲಾಗಿತ್ತು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಅಗಾಧ ಕೆಲಸದ ಒತ್ತಡವನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು. ಆದರೆ, ಐಸಿಡಿಎಸ್ ಕರ್ತವ್ಯದೊಂದಿಗೆ ಹೆಚ್ಚುವರಿಯಾಗಿ ಎಸ್ಐಆರ್ ಕೆಲಸದಲ್ಲಿ ತೊಡಗಿದ್ದುದರಿಂದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಸಿಗಲಿಲ್ಲ. ಅವರು ಇಂದು ಬೆಳಗ್ಗೆ ಮೃತಪಟ್ಟರು’’ ಸಂಪ್ರಿತಾ ಚೌಧರಿ ಅವರ ಪತಿ ತಿಳಿಸಿದ್ದಾರೆ.
ಬುಧವಾರ ಸಂಭವಿಸಿದ ಸಂಪ್ರೀತಾ ಚೌಧರಿ ಅವರ ಸಾವು ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಪ್ರತಿಪಕ್ಷವಾದ ಬಿಜೆಪಿಯ ನಡುವಿನ ವಾಗ್ವಾದ ತೀವ್ರಗೊಳ್ಳಲು ಕಾರಣವಾಗಿದೆ.
ಸಂಪ್ರಿತಾ ಅವರ ಸಾವಿಗೆ ಚುನಾವಣಾ ಆಯೋಗ ಕಾರಣ ಎಂದು ಮಾಲ್ಡಾದ ಇಂಗ್ಲೀಷ್ ಬಝಾರ್ ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ 15ರ ಸ್ಥಳೀಯ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಗಾಯತ್ರಿ ಘೋಷ್ ಆರೋಪಿಸಿದ್ದಾರೆ.
‘‘ಆಕೆಯ ದೈನಂದಿನ ಐಸಿಡಿಎಸ್ ಕೆಲಸದ ವೇಳಾಪಟ್ಟಿಯ ಜೊತೆಗೆ ಕಠಿಣ ಎಸ್ಐಆರ್ ಕರ್ತವ್ಯದಿಂದ ಉಂಟಾದ ಅಸಹನೀಯ ಕೆಲಸದ ಹೊರೆ ಹಾಗೂ ಒತ್ತಡದಿಂದ ಅವರು ಮೃತಪಟ್ಟಿದ್ದಾರೆ’’ ಎಂದು ಘೋಷ್ ಆರೋಪಿಸಿದ್ದಾರೆ.







