ಎಸ್ಐಆರ್| ಪಶ್ಚಿಮಬಂಗಾಳದಲ್ಲಿ ಮತ್ತೋರ್ವ ಬಿಎಲ್ಒ ಮೃತ್ಯು

ಸಾಂದರ್ಭಿಕ ಚಿತ್ರ | Photo Credit ; PTI
ಕೋಲ್ಕತಾ, ಜ. 16: ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ಗುರುವಾರ ಮತ್ತೊಬ್ಬರು ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ) ಮೃತಪಟ್ಟಿದ್ದಾರೆ.
ಇದರೊಂದಿಗೆ ಕಳೆದ ವರ್ಷ ನವೆಂಬರ್ 4ರಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಆರಂಭವಾದ ಬಳಿಕ ರಾಜ್ಯದಲ್ಲಿ ಮೃತಪಟ್ಟ ಬೂತ್ ಮಟ್ಟದ ಅಧಿಕಾರಿಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಬೂತ್ ಮಟ್ಟದ ಅಧಿಕಾರಿ ಅಶೋಕ್ ದಾಸ್ (47) ಅವರ ಮೃತದೇಹ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಶನ್ (ಕೆಎಂಸಿ)ನ ವಾರ್ಡ್ ಸಂಖ್ಯೆ 19ರ ವ್ಯಾಪ್ತಿಯಲ್ಲಿರುವ ಮುಕುಂದಪುರ ಪ್ರದೇಶದ ಅಹಲ್ಯನಗರದಲ್ಲಿರುವ ಅವರ ನಿವಾಸದ ಸ್ನಾನಗೃಹದ ಸೀಲಿಂಗ್ ಫ್ಯಾನ್ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಶೋಕ್ ದಾಸ್ ಅವರು ವೃತ್ತಿಯಲ್ಲಿ ಶಾಲಾ ಅಧ್ಯಾಪಕರಾಗಿದ್ದರು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಬೆದರಿಕೆಯಿಂದ ಅಶೋಕ್ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿಯ ಸ್ಥಳೀಯ ನಾಯಕರು ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದು ಹಾಕುವುದು ಹಾಗೂ ಸೇರಿಸುವುದಕ್ಕೆ ಸಂಬಂಧಿಸಿದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಟಿಎಂಸಿ ಕಾರ್ಯಕರ್ತರು ಅವರಿಗೆ ಒತ್ತಡ ಹಾಕಿದ್ದಾರೆ ಹಾಗೂ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ತೃಣಮೂಲ ಕಾಂಗ್ರೆಸ್ ನಾಯಕತ್ವ, ‘‘ಬಿಜೆಪಿ ಉದ್ದೇಶಪೂರ್ವಕವಾಗಿ ನಮ್ಮ ವಿರುದ್ಧ ಸುಳ್ಳು ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ. ಇದು ನಮ್ಮ ವಿರುದ್ಧ ಬಿಜೆಪಿಯ ಯೋಜಿತ ಪಿತೂರಿಯಾಗಿದೆ. ಯೋಜಿತವಲ್ಲದ ಎಸ್ಐಆರ್ ಪ್ರಕ್ರಿಯೆಯಿಂದ ಅವರು ಕೆಲಸದ ಒತ್ತಡ ಹಾಗೂ ಆಂತಕಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಸ್ಐಆರ್ ಸಂಬಂಧಿತ ಕೆಲಸದ ಒತ್ತಡ ಹಾಗೂ ಆತಂಕದ ಕಾರಣದಿಂದ ನಾಗರಿಕರು ಹಾಗೂ ಬೂತ್ ಮಟ್ಟದ ಅಧಿಕಾರಿಗಳ ಸಾವಿನ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಶನಿವಾರ ಪತ್ರ ಬರೆದಿದ್ದರು.







