ಪಶ್ಚಿಮ ಬಂಗಾಳ | S I R ವೇಳೆ ಜನರಿಗೆ ಕಿರುಕುಳ ಆರೋಪ: ಕೋಲ್ಕತ್ತಾದಲ್ಲಿ ಪ್ರತಿಭಟನಾ ಜಾಥಾ

Photo Credit : PTI
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (SIR) ವೇಳೆ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಪಶ್ಚಿಮ ಬಂಗಾಳ ಸರ್ಕಾರದ ಸಚಿವ ಸಿದ್ದಿಕುಲ್ಲಾ ಚೌಧುರಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಜಾಥಾ ನಡೆಯಿತು.
ಜಮಾಯಿತ್ ಇ-ಉಲಾಮಾ-ಇ-ಹಿಂದ್ ನೇತೃತ್ವದಲ್ಲಿ ನಡೆದ ಸುಮಾರು 4.5 ಕಿಮೀ ದೂರದ ಈ ಮೆರವಣಿಗೆ ಉತ್ತರ-ಕೇಂದ್ರ ಕೋಲ್ಕತ್ತಾದ ರಾಜಾಬಝಾರ್ ಪ್ರದೇಶದಿಂದ ಆರಂಭಗೊಂಡು, ನಗರದ ಕೇಂದ್ರ ಭಾಗವಾದ ಎಸ್ಪ್ಲನೇಡ್ ಬಳಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಹಾಗೂ ಹಿರಿಯ ನಾಗರಿಕರು, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹಿರಿಯ ನಾಗರಿಕರು ಸೇರಿದಂತೆ ಪಶ್ಚಿಮ ಬಂಗಾಳದ ನಾಗರಿಕರು ತಮ್ಮ ಪರಿಶೀಲನೆಗಾಗಿ ಗಂಟೆಗಟ್ಟಲೆ ಉದ್ದವಾದ ಸರತಿ ಸಾಲಿನಲ್ಲಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇದು ಅಮಾನವೀಯವಾಗಿದೆ ಎಂದು ಚೌಧುರಿ ಆರೋಪಿಸಿದ್ದಾರೆ.
“ನಾವು ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ. ನಮ್ಮ ಮೇಲೆ ಅನ್ಯಾಯ ನಡೆಯುತ್ತಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





