ಪಶ್ಚಿಮ ಬಂಗಾಳ: ಈಡಿಯಿಂದ ಇನ್ನೋರ್ವ ಟಿಎಂಸಿ ನಾಯಕನ ಬಂಧನ, ಅಧಿಕಾರಿಗಳ ಮೇಲೆ ಮತ್ತೆ ದಾಳಿ

Photo: ಶಂಕರ ಆಧ್ಯ \ IANS
ಕೋಲ್ಕತಾ: ಪಶ್ವಿಮ ಬಂಗಾಳದಲ್ಲಿಯ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಬೊಂಗಾಂವ್ ನಗರಸಭೆಯ ಮಾಜಿ ಅಧ್ಯಕ್ಷ ಶಂಕರ ಆಧ್ಯ ಅವರನ್ನು ಜಾರಿ ನಿರ್ದೇಶನಾಲಯವು ಶನಿವಾರ ನಸುಕಿನಲ್ಲಿ ಬಂಧಿಸಿದೆ. ಆಧ್ಯ ಉತ್ತರ ಪರಗಣಗಳ ಜಿಲ್ಲೆಯ ಟಿಎಂಸಿ ನಾಯಕರಾಗಿದ್ದಾರೆ.
ಆಧ್ಯ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಆವರಣಗಳಲ್ಲಿ ಶೋಧ ಕಾರ್ಯಾಚರಣೆಗಳ ಬಳಿಕ ಬೊಂಗಾಂವ್ ನ ಸಿಮುಲ್ತೋಲಾದಲ್ಲಿನ ನಿವಾಸದಿಂದ ಆಧ್ಯರನ್ನು ಬಂಧಿಸಲಾಗಿದೆ. ಈಡಿ ಅಧಿಕಾರಿಗಳು ಶುಕ್ರವಾರ ಕನಿಷ್ಠ 17 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು. ಆಧ್ಯ ನಿವಾಸದ ಹೊರಗೆ ಜಮಾಯಿಸಿದ್ದ ಅವರ ಬೆಂಬಲಿಗರು ಅಧಿಕಾರಿಗಳು ಅವರನ್ನು ಕರೆದೊಯ್ಯವುದನ್ನು ತಡೆಯಲು ಪ್ರಯತ್ನಿಸಿದ್ದರು ಮತ್ತು ಅವರ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಈಡಿತಂಡದ ಜೊತೆಯಲ್ಲಿದ್ದ ಸಿ ಆರ್ ಪಿ ಎಫ್ ಸಿಬ್ಬಂದಿಗಳು ಲಾಠಿ ಪ್ರಹಾರ ನಡೆಸಿದರು.
ಶೋಧ ಕಾರ್ಯಾಚರಣೆಯ ಜೊತೆ ಆಧ್ಯ ಅವರನ್ನು ಪ್ರಶ್ನಿಸಲಾಗಿತ್ತು. ಸಮರ್ಪಕ ಉತ್ತರಗಳನ್ನು ನೀಡದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ಈಡಿ ಅಧಿಕಾರಿಯೋರ್ವರು ತಿಳಿಸಿದರು. ಶುಕ್ರವಾರ ನೆರೆಯ ದಕ್ಷಿಣ 24 ಪರಗಣಗಳ ಜಿಲ್ಲೆಯ ಸಂದೇಶ ಖಲಿಯಲ್ಲಿ ಟಿಎಂಸಿ ನಾಯಕ ಶಹಾಜಹಾನ್ ಶೇಖ್ ನಿವಾಸದ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿಯೂ ಗುಂಪು ಈಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು. ವಾಹನಗಳಿಗೂ ಹಾನಿಯನ್ನುಂಟು ಮಾಡಿತ್ತು. ಅಧಿಕಾರಿಗಳ ಮೊಬೈಲ್ ಫೋನ್ ಗಳು ಮತ್ತು ಪರ್ಸ್ ಇತ್ಯಾದಿಗಳನ್ನು ಗುಂಪು ಕಿತ್ತುಕೊಂಡಿತ್ತು. ಹಲ್ಲೆಯಿಂದಾಗಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದರು.
ಆಧ್ಯ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಬಂಧಿಸಲ್ಪಟ್ಟ ರಾಜ್ಯದ ಸಚಿವ ಜ್ಯೋತಿಪ್ರಿಯ ಮಲಿಕ್ ಅವರ ಆಪ್ತರೆನ್ನಲಾಗಿದೆ. ಈಡಿ ಅಧಿಕಾರಿಗಳು ಆಧ್ಯ ಮತ್ತು ಅವರ ಸಹವರ್ತಿಗಳ ನಿವಾಸಗಳು, ಅವರಿಗೆ ಸಂಬಂಧಿಸಿದ ಐಸ್ ಕ್ರೀಂ ಫ್ಯಾಕ್ಟರಿ ಮತ್ತು ಅವರ ಪತ್ನಿಯ ತವರುಮನೆಯಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಿತ್ತು.
ಆಧ್ಯರ ಪತ್ನಿಯ ತವರುಮನೆಯಿಂದ ದಾಖಲೆಗಳ ಜೊತೆಗೆ ಎಂಟು ಲಕ್ಷ ರೂ.ನಗದು ಹಣವನ್ನೂ ಈಡಿವಶಪಡಿಸಿಕೊಂಡಿದೆ.
ತಾನು ಈಡಿಯೊಂದಿಗೆ ಸಹಕರಿಸುತ್ತೇನೆ ಮತ್ತು ಸಾಧ್ಯವಿರುವ ಎಲ್ಲ ರೀತಿಗಳಲ್ಲಿಯೂ ನೆರವಾಗುತ್ತೇನೆ ಎಂದು ಆಧ್ಯ ಬಂಧನದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.







