ಪಶ್ಚಿಮ ಬಂಗಾಳ: ಸಂದೇಶಖಾಳಿಯಲ್ಲಿ ಬಾಂಗ್ಲಾ ಪತ್ರಕರ್ತನ ಬಂಧನ
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡನೆ

ಪತ್ರಕರ್ತ ಸಂತು ಪಾನ್ | Photo: Santu Pan/Facebook
ಹೊಸದಿಲ್ಲಿ : ಪಶ್ಚಿಮಬಂಗಾಳದ ಸಂದೇಶಖಾಳಿಯಲ್ಲಿ ‘ರಿಪಬ್ಲಿಕ್ ಬಾಂಗ್ಲಾ’ದ ಪತ್ರಕರ್ತ ಸಂತು ಪಾನ್ ಅವರನ್ನು ಬಂಧಿಸಿರುವುದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮಂಗಳವಾರ ಖಂಡಿಸಿದೆ. ಸಂತು ಪಾನ್ ಅವರ ಬಂಧನ ಕಳವಳಕಾರಿ ಎಂದು ಅದು ಹೇಳಿದೆ.
ಅತಿಕ್ರಮಣ ಹಾಗೂ ಮಹಿಳೆಯೋರ್ವರ ಚಾರಿತ್ರ್ಯಕ್ಕೆ ಧಕ್ಕೆ ತಂದ ಆರೋಪದಲ್ಲಿ ಪಾನ್ ಅವರನ್ನು ಸೋಮವಾರ ಬಂಧಿಸಲಾಗಿದೆ. ಸಂದೇಶಖಾಳಿಯಿಂದ ವರದಿ ಮಾಡುತ್ತಿರುವಾಗ ಪಾನ್ ಮಹಿಳೆಯೋರ್ವರ ಮನೆಗೆ ನುಗ್ಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಹಾಗೂ ಅವರ ಇತರ ಇಬ್ಬರು ಸಹವರ್ತಿಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಭೂ ಅತಿಕ್ರಮಣದ ಆರೋಪದ ಕುರಿತು ವರದಿ ಮಾಡಲು ಪಾನ್ ಅವರು ಸಂದೇಶಖಾಳಿಯಲ್ಲಿ ಇದ್ದರು.
ಪಾನ್ ವಿರುದ್ಧ ಇಂತಹ ಆರೋಪ ಇದ್ದರೆ ಪೊಲೀಸರು ತನಿಖೆ ನಡೆಸಬೇಕು. ಆದರೆ, ವರದಿ ಮಾಡುತ್ತಿರುವ ಸಂದರ್ಭ ಅವರನ್ನು ಬಂಧಿಸುವುದು ಕಳವಳಕಾರಿಯಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಮಂಗಳವಾರ ಪ್ರತಿಪಾದಿಸಿದೆ.
‘‘ಈ ಕುರಿತು ತ್ವರಿತ ವಿಚಾರಣೆ ನಡೆಸುವಂತೆ ಹಾಗೂ ಪಾನ್ ಗೆ ನ್ಯಾಯದ ಖಾತರಿ ನೀಡುವಂತೆ ಎಡಿಟರ್ಸ್ ಗಿಲ್ಡ್ ಪಶ್ಚಿಮಬಂಗಾಳ ಸರಕಾರವನ್ನು ಆಗ್ರಹಿಸುತ್ತದೆ’’ ಎಂದು ಅದು ತಿಳಿಸಿದೆ.
ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.







