ಪಶ್ಚಿಮ ಬಂಗಾಳ: ತಲೆಮರೆಸಿಕೊಂಡ ಟಿಎಂಸಿ ನಾಯಕ ಶಹಾಜಹಾನ್ ಶೇಖ್ ಸಹವರ್ತಿಗಳ ನಿವಾಸದ ಮೇಲೆ ಈಡಿ ದಾಳಿ

ಶಹಜಹಾನ್ ಶೇಖ್ | Photo: telegraphindia.com
ಕೋಲ್ಕತಾ: ಮೋಸದಿಂದ ಭೂ ಅತಿಕ್ರಮಣ ನಡೆಸಿದ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಅವರೊಂದಿಗೆ ನಂಟು ಹೊಂದಿರುವ ಉದ್ಯಮಿಗಳ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ.
ಹೌರಾ, ಬಿಜೋಯ್ಗಢ ಹಾಗೂ ಬಿರಾತಿ ಸೇರಿದಂತೆ ನಗರದ 5 ವಿವಿಧ ಸ್ಥಳ ಹಾಗೂ ಸುತ್ತಮುತ್ತ ಶುಕ್ರವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ಹಾಗೂ ಶೋಧ ಕಾರ್ಯಾಚರಣೆ ನಡೆಸಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘‘ಶಹಾಜಹಾನ್ ಶೇಖ್ ಹಾಗೂ ಅವರ ಸಹವರ್ತಿಗಳ ವಿರುದ್ಧದ ಮೋಸದಿಂದ ಭೂಮಿ ಅತಿಕ್ರಮಣ ನಡೆಸಿದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ ದಾಳಿ ಇದಾಗಿದೆ. ಇವರು ಶಹಾಜಹಾನ್ ಶೇಖ್ ನೊಂದಿಗೆ ಮೀನಿನ ವ್ಯವಹಾರದಲ್ಲಿ ತೊಡಗಿದ್ದರು. ನಾವು ಕೆಲವು ನಿರ್ದಿಷ್ಟ ದಾಖಲೆಗಳಿಗಾಗಿ ಪರಿಶೀಲನೆ ನಡೆಸುತ್ತಿದ್ದೇವೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ಮಾಹಿತಿ ವರದಿಯಾಗಿ ಜಾರಿ ನಿರ್ದೇಶನಾಲಯ ಸಾಮಾನ್ಯವಾಗಿ ಇಸಿಐಆರ್ ಅನ್ನು ದಾಖಲಿಸುತ್ತದೆ. ಇದು ಕ್ರಿಮಿನಲ್ ಪ್ರಕರಣದಲ್ಲಿ ದಾಖಲಿಸುವ ಪ್ರಥಮ ಮಾಹಿತಿ ವರದಿ (ಎಫ್ಐಆರ್)ಗೆ ಸಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.





