ಚುನಾವಣಾಧಿಕಾರಿಗಳ ವಿರುದ್ಧದ ಕ್ರಮ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಅಸಮಾಧಾನ

ಚುನಾವಣಾ ಆಯೋಗ | Photo Credit : PTI
ಕೋಲ್ಕತ್ತಾ: ಕಳೆದ ವರ್ಷದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ತಪ್ಪೆಸಗಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(SIR) ಕರ್ತವ್ಯದಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಸರ್ಕಾರ ತನ್ನನ್ನು ಸಂಪರ್ಕಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಮತಪಟ್ಟಿಗಳ ತಯಾರಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದ ನಾಲ್ವರು ಅಧಿಕಾರಿಗಳು ತಪ್ಪೆಸಗಿರುವುದನ್ನು ಚುನಾವಣಾ ಆಯೋಗ ಪತ್ತೆಹಚ್ಚಿತ್ತು. ಈ ಅಧಿಕಾರಿಗಳನ್ನು ಬರುಯಪುರ್ ಪೂರ್ವ ವಿಧಾನಸಭಾ ಕ್ಷೇತ್ರದ ಇಆರ್ಒ ದೇಬೋತ್ತಮ್ ದತ್ತ ಚೌಧುರಿ, ಬರುಯಪುರ್ ಪೂರ್ವ ವಿಧಾನಸಭಾ ಕ್ಷೇತ್ರದ ಎಇಆರ್ಒ ತಥಾಗತ ಮಂಡಲ್, ಮೊಯ್ನಾ ವಿಧಾನಸಭಾ ಕ್ಷೇತ್ರದ ಇಆರ್ಒ ಬಿಯೊಲೋಬ್ ಸರ್ಕಾರ್ ಹಾಗೂ ಎಇಆರ್ಒ ಮೊಯ್ನಾ ಎಂದು ಗುರುತಿಸಲಾಗಿದೆ.
ಆಗಸ್ಟ್ 5ರಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಚುನಾವಣಾ ಆಯೋಗ, ಈ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಅವರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಬೇಕು ಎಂದು ಸೂಚಿಸಿತ್ತು. ಆದರೆ, ರಾಜ್ಯ ಸರ್ಕಾರ ಈ ಸೂಚನೆಗಳನ್ನು ಕೇವಲ ಭಾಗಶಃ ಮಾತ್ರ ಪಾಲಿಸಿತ್ತು.
ಬಳಿಕ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದ ಚುನಾವಣಾ ಆಯೋಗ, ಅವರನ್ನು ಹೊಸದಿಲ್ಲಿಗೆ ಕರೆಸಿಕೊಂಡಿತ್ತು. ಆದರೆ, ತಪ್ಪಿತಸ್ಥ ಚುನಾವಣಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೂ ಮುನ್ನ ತನಿಖೆ ನಡೆಸಬೇಕು ಎಂಬ ರಾಜ್ಯ ಸರ್ಕಾರದ ಆಗ್ರಹವನ್ನು ಮನ್ನಿಸಲಾಗಿದೆ ಎಂದು ಚುನಾವಣಾ ಆಯೋಗವೇ ಸ್ಪಷ್ಟಪಡಿಸಿತ್ತು.
“ನಿಗದಿಪಡಿಸಲಾಗಿರುವ ನಿಯಮಗಳನುಸಾರ ಹಾಗೂ ಕಡ್ಡಾಯ ಸಂಪರ್ಕವಿಲ್ಲದೆ ಶಿಸ್ತು ಕ್ರಮವನ್ನು ಜರುಗಿಸಲಾಗಿದೆ. ಇಂತಹ ಶಿಸ್ತುಕ್ರಮವನ್ನು ಚುನಾವಣಾ ಆಯೋಗ ಅಂತಿಮಗೊಳಿಸುವುದಿಲ್ಲ. ಅದರಂತೆ, ಚುನಾವಣಾ ಆಯೋಗದ ದೃಷ್ಟಿಯಲ್ಲಿ ಈ ಕ್ರಮವು ನಿಯಮಾನುಸಾರ ಕ್ರಮಬದ್ಧವಾಗಿಲ್ಲ. ಹೀಗಾಗಿ, ಈ ಕ್ರಮವನ್ನು ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಕಟ್ಟುನಿಟ್ಟಾಗಿ ಮರುಪರಿಶೀಲಿಸಬೇಕು” ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಲಾಗಿದೆ.
ಈ ಲೋಪಕ್ಕೆ ಯಾರು ಹೊಣೆ ಹಾಗೂ ಯಾಕಾಗಿ ಇಂತಹ ಲೋಪ ಸಂಭವಿಸಿದೆ ಎಂಬುದರ ಕುರಿತು ಇನ್ನೂ 72 ಗಂಟೆಗಳೊಳಗಾಗಿ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಜೊತೆಗೆ, ನಾಲ್ವರು ಅಧಿಕಾರಿಗಳ ವಿರುದ್ಧ ನಡೆದಿರುವ ತನಿಖೆಯ ವಿವರಗಳನ್ನು ಒದಗಿಸುವಂತೆಯೂ ನಿರ್ದೇಶನ ನೀಡಿದೆ.







