ಪಶ್ಚಿಮ ಬಂಗಾಳ ಅತ್ಯಾಚಾರಿಗಳ ಸ್ವರ್ಗವಾಗುತ್ತಿದೆ: ದೀದಿ ಸರಕಾರದ ಮೇಲೆ ಬಿಜೆಪಿ ವಾಗ್ದಾಳಿ

PC:PTI
ದುರ್ಗಾಪುರ: ಸ್ನೇಹಿತನ ಜತೆ ಹೊರ ಹೊರಟಿದ್ದ ಎರಡನೇ ವರ್ಷದ ಎಂಬಿಬಿಎಸ್ ವೈದ್ಯ ವಿದ್ಯಾರ್ಥಿನಿ (23) ಮೇಲೆ ಐದು ಜನ ಅಪರಿಚಿತರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆನ್ನಲ್ಲೇ ಘಟನೆ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳ ಅತ್ಯಾಚಾರಿಗಳ ಸ್ವರ್ಗವಾಗುತ್ತಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಆಡಳಿತಾರೂಢ ಟಿಎಂಸಿ ಮೇಲೆ ವಾಗ್ದಾಳಿ ನಡೆಸಿದೆ.
ಒಡಿಶಾದ ಬಲಸೋರ್ ಮೂಲದ ವಿದ್ಯಾರ್ಥಿನಿಯ ಸ್ನೇಹಿತ ಹಾಗೂ ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಕುಟುಂಬದವರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಆಕೆಯ ಸಹಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಂಧಿತ ವಿದ್ಯಾರ್ಥಿಯ ವಿಚಾರಣೆ ಆರಂಭಿಸಲಾಗಿದ್ದು, ಸಹಪಾಠಿ ಹಾಗೂ ಆತನ ಸಹವರ್ತಿಗಳು ಫೋನ್ ಕಸಿದುಕೊಂಡು ಹಣಕ್ಕಾಗಿ ಆಗ್ರಹಿಸಿದರು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಜತೆಗಿದ್ದ ವಿದ್ಯಾರ್ಥಿ ಹೊರ ಹೋದ ತಕ್ಷಣ ಮೂವರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು. ಗಾಯಗೊಂಡಿದ್ದ ಆಕೆಯನ್ನು ಹಾಸ್ಟೆಲ್ ಹಿಂಭಾಗದಲ್ಲಿ ಬಿಟ್ಟು ಪರಾರಿಯಾಗಿದ್ದರು. ಸಹಪಾಠಿಗಳು ಕರೆ ಮಾಡಿ ಮಾಹಿತಿ ನೀಡಿದ ಬಳಿಕ ತಂದೆ ಹಾಗೂ ತಾಯಿ ದುರ್ಗಾಪುರಕ್ಕೆ ಶನಿವಾರ ಆಗಮಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಉದ್ದೇಶಪೂರ್ವಕ ಓಲೈಕೆ ರಾಜಕಾರಣದ ಮೂಲಕ ಮಮತಾ ಬ್ಯಾನರ್ಜಿಯವರು ರಾಜ್ಯವನ್ನು ಮಹಿಳೆಯರ ಸುರಕ್ಷತೆಯ ದುಃಸ್ವಪ್ನವಾಗಿ ಪರಿವರ್ತಿಸಿದ್ದಾರೆ ಎಂದು ಆಪಾದಿಸಿದೆ.
ಕೇಂದ್ರ ಸಚಿವ ಸುಕಾಂತಾ ಮಜೂಂದಾರ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ, "ಮಮತಾ ಈ ರಾಜ್ಯವನ್ನು ಅಪರಾಧಿಗಳು ಮತ್ತು ಅತ್ಯಾಚಾರಿಗಳಿಗೆ ಸ್ವರ್ಗವಾಗಿ ಪರಿವರ್ತಿಸಿದ್ದಾರೆ" ಎಂದು ದೂರಿದ್ದಾರೆ. "ಬಂಗಾಳ ಮಹಿಳೆಯರಿಗೆ ಸುರಕ್ಷಿತವಲ್ಲ; ಟಿಎಂಸಿ ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡುವವರೆಗೆ ರಾಜ್ಯದ ಮಹಿಳೆಯರು ಭೀತಿಯಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ. 2026ರಲ್ಲಿ ಮಮತಾ ಹೋಗಲೇಬೇಕು" ಎಂದು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದಾರೆ.







