ಆ್ಯಸಿಡ್ ದಾಳಿಗಳಲ್ಲಿ ಪಶ್ಚಿಮ ಬಂಗಾಳ ದೇಶದಲ್ಲೇ ಅಗ್ರ : ಎನ್ಸಿಆರ್ಬಿ ವರದಿ

Credit : freepik.com
ಹೊಸದಿಲ್ಲಿ,ಅ.3: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್ಸಿಆರ್ಬಿ) ಇತ್ತೀಚಿಗೆ ಬಿಡುಗಡೆಗೊಳಿಸಿದ 2023ರ ದತ್ತಾಂಶಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ ರಾಜ್ಯದಲ್ಲಿ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಆ್ಯಸಿಡ್ ದಾಳಿಗಳು ಮುಂದುವರಿದಿವೆ.
2023ರಲ್ಲಿ ದೇಶಾದ್ಯಂತ 207 ಆ್ಯಸಿಡ್ ದಾಳಿ ಪ್ರಕರಣಗಳು ದಾಖಲಾಗಿದ್ದು, ಪ.ಬಂಗಾಳವೊಂದರಲ್ಲೇ ಇಂತಹ 57 (ಶೇ.27.5) ಘಟನೆಗಳು ನಡೆದಿದ್ದವು.
ಈ 57 ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಬಲಿಪಶುಗಳು/ಬದುಕುಳಿದವರ ಸಂಖ್ಯೆ 60 ಆಗಿದ್ದರೆ, ದೇಶಾದ್ಯಂತ ನಡೆದ 207 ಆ್ಯಸಿಡ್ ದಾಳಿಗಳಲ್ಲಿ ಇಂತಹವರ ಸಂಖ್ಯೆ 220 ಆಗಿತ್ತು. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 31 ಆ್ಯಸಿಡ್ ದಾಳಿಗಳು ನಡೆದಿದ್ದು,ಬಲಿಪಶುಗಳು/ಬದುಕುಳಿದವರ ಸಂಖ್ಯೆ 31 ಆಗಿತ್ತು.
ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ರಾಜ್ಯವಾಗಿರುವ ಪಶ್ಚಿಮ ಬಂಗಾಳವು ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಆ್ಯಸಿಡ್ ದಾಳಿಗಳನ್ನು ದಾಖಲಿಸಿದೆ. ಎನ್ಸಿಆರ್ಬಿಯ 2022ರ ವರದಿಯ ಪ್ರಕಾರ ರಾಜ್ಯದಲ್ಲಿ 48 ಆ್ಯಸಿಡ್ ದಾಳಿಗಳು ನಡೆದಿದ್ದು, ಬಲಿಪಶುಗಳು/ಬದುಕುಳಿದವರ ಸಂಖ್ಯೆ 52 ಆಗಿತ್ತು. ಆ ವರ್ಷ ದೇಶದಲ್ಲಿ ಒಟ್ಟು 202 ಆ್ಯಸಿಡ್ ದಾಳಿ ಘಟನೆಗಳು ನಡೆದಿದ್ದವು. ಪಶ್ಚಿಮ ಬಂಗಾಳದಲ್ಲಿ 2018ರಿಂದಲೂ ದೇಶದಲ್ಲಿ ಅತಿ ಹೆಚ್ಚು ಆ್ಯಸಿಡ್ ದಾಳಿಗಳು ನಿರಂತರವಾಗಿ ನಡೆಯುತ್ತಿವೆ.
ದೇಶದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಅಂಗಡಿಗಳಲ್ಲಿ ಪರವಾನಿಗೆಯಿಲ್ಲದೆ ಆ್ಯಸಿಡ್ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆ್ಯಸಿಡ್ ದಾಳಿಗಳಲ್ಲಿ ಬದುಕುಳಿದವರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. 2006ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಮಾರಾಟದ ರಿಜಿಸ್ಟರ್ ನಿರ್ವಹಿಸದ ಅಂಗಡಿಗಳು ಪರವಾನಿಗೆಯಿಲ್ಲದೆ ಆ್ಯಸಿಡ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ರಿಜಿಸ್ಟರ್ ಆ್ಯಸಿಡ್ ಖರೀದಿಸಿದ ವ್ಯಕ್ತಿಗಳ ವಿವರ ಮತ್ತು ಮಾರಾಟ ಮಾಡಲಾದ ಆ್ಯಸಿಡ್ನ ಪ್ರಮಾಣವನ್ನು ಒಳಗೊಂಡಿರಬೇಕು.
ಆ್ಯಸಿಡ್ ದಾಳಿಗಳಲ್ಲಿ ಬದುಕುಳಿದವರಿಗೆ ಪರಿಹಾರ, ಪುನರ್ವಸತಿಗೆ ನಿಬಂಧನೆಗಳಿದ್ದರೂ ಈ ವರ್ಷ ಕೋಲ್ಕತಾದಲ್ಲಿಯ ಸಮುದಾಯ ದುರ್ಗಾ ಪೂಜೆಯು ಆ್ಯಸಿಡ್ ದಾಳಿಗಳಲ್ಲಿ ಬದುಕುಳಿದವರ ದುಃಸ್ಥಿತಿಯನ್ನು ಎತ್ತಿ ತೋರಿಸಿದೆ.
ಈ ನಡುವೆ 2023ರಲ್ಲಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳ 34,691 ಪ್ರಕರಣಗಳು ದಾಖಲಾಗಿದ್ದು, ಇದು 2022ರಲ್ಲಿ ದಾಖಲಾಗಿದ್ದ 34,738 ಪ್ರಕರಣಗಳಿಗಿಂತ ಕೊಂಚ ಕಡಿಮೆಯಾಗಿದೆ.







