ಪ್ರಶ್ನೆ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಉಲ್ಲೇಖ; ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯವೊಂದರ ವಿರುದ್ಧ ತೀವ್ರ ಆಕ್ರೋಶ

ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸರಕಾರಿ ವಿದ್ಯಾಸಾಗರ್ ವಿಶ್ವವಿದ್ಯಾಲಯ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದು, ತನ್ನ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಸಂಬೋಧಿಸಿರುವುದರಿಂದ, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಪ್ರಮಾದದ ವಿರುದ್ಧ ತೀವ್ರ ಸ್ವರೂಪದ ರಾಜಕೀಯ ಟೀಕೆ ವ್ಯಕ್ತವಾಗಿದ್ದು, ಇದರಿಂದಾಗಿ, ಅದು ಮುದ್ರಣ ದೋಷದಿಂದಾಗಿರುವ ತಪ್ಪು ಎಂದು ವಿಶ್ವವಿದ್ಯಾಲಯ ಸಾರ್ವಜನಿಕ ಕ್ಷಮಾಪಣೆ ಬಿಡುಗಡೆ ಮಾಡಿ, ಸಮಜಾಯಿಷಿ ನೀಡಿದೆ.
ಈ ದೋಷಪೂರಿತ ಉಲ್ಲೇಖವು ಬಿಎ ಆನರ್ಸ್ ನ ಆರನೇ ಸೆಮಿಸ್ಟರ್ ನ ಬಂಗಾಳಿ ಭಾಷೆಯಲ್ಲಿನ ಇತಿಹಾಸ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ 12ನೇ ಪ್ರಶ್ನೆಯಲ್ಲಿ ಕಂಡು ಬಂದಿದ್ದು, ಈ ಪ್ರಶ್ನೆಯಲ್ಲಿ ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಉಗ್ರರಿಂದ ಹತರಾದ ಮಿಡ್ನಾಪುರ್ ನ ಮೂವರು ಜಿಲ್ಲಾಧಿಕಾರಿಗಳನ್ನು ಹೆಸರಿಸಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ನಂತರ, ಈ ತಪ್ಪನ್ನು ಒಪ್ಪಿಕೊಂಡಿರುವ ವಿಶ್ವವಿದ್ಯಾಲಯ, ಈ ಪ್ರಮಾದ ಕರಡು ಪ್ರತಿ ಪರಿಶೀಲನೆಯ ವೇಳೆ ಆಗಿರುವ ಲೋಪ ಎಂದು ಸ್ಪಷ್ಟೀಕರಣ ನೀಡಿದೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಉಪ ಕುಲಪತಿ ದೀಪಕ್ ಕಾರ್, “ಇದು ಮುದ್ರಣ ದೋಷವಾಗಿದ್ದು, ಕರಡು ಪ್ರತಿ ಪರಿಶೀಲನೆಯ ವೇಳೆ ಗಮನಿಸದೆ ಇರುವುದರಿಂದ ಆಗಿರುವ ಪ್ರಮಾದವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ದೋಷಪೂರಿತ ಪ್ರಶ್ನೆಯನ್ನು ಖಂಡಿಸಿರುವ ಶಿಕ್ಷಣ ತಜ್ಞ ಪಬಿತ್ರ ಸರ್ಕಾರ್, “ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ ಯುವಕರನ್ನು ವಸಾಹತು ಆಡಳಿತಗಾರರಂತೆ ಈ ಸ್ವತಂತ್ರ ಭಾರತದಲ್ಲಿ ‘ಉಗ್ರರು’ ಎಂದು ಸಂಬೋಧಿಸುವುದು ಊಹಿಸಲೂ ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ನಾಯಕ ಸುವೇಂದು ಅಧಿಕಾರಿ, “ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಸಂಬೋಧಿಸಿರುವುದು ಸಂಪೂರ್ಣ ಅತಿರೇಕದ ಕ್ರಮ” ಎಂದು ವಾಗ್ದಾಳಿ ನಡೆಸಿದ್ದಾರೆ.







