MGNREGA ಯೋಜನೆಯನ್ನು ಮೋದಿ ಸರಕಾರ ನೆಲಸಮಗೊಳಿಸಿದೆ: ಸೋನಿಯಾ ಗಾಂಧಿ

ಸೋನಿಯಾ ಗಾಂಧಿ | Photo Credit : @INCIndia Via PTI
ಹೊಸದಿಲ್ಲಿ: ಮೋದಿ ಸರಕಾರ MGNREGA ಯೋಜನೆಯನ್ನು ನೆಲಸಮಗೊಳಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ಈ ಕರಾಳ ಶಾಸನವನ್ನು ಹಿಂಪಡೆಯುವವರೆಗೂ, ಅದನ್ನು ಕಾಂಗ್ರೆಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಧಿಕ್ಕರಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಕುರಿತು ವಿಡಿಯೊ ಸಂದೇಶ ಹಂಚಿಕೊಂಡಿರುವ ಸೋನಿಯಾ ಗಾಂಧಿ, “ಮೋದಿ ಸರಕಾರ MGNREGA ಯೋಜನೆಯನ್ನು ದುರ್ಬಲಗೊಳಿಸುವ ಮೂಲಕ, ಲಕ್ಷಾಂತರ ರೈತರು, ಕೂಲಿಕಾರರು ಹಾಗೂ ಭೂರಹಿತ ವ್ಯಕ್ತಿಗಳ ಹಿತಾಸಕ್ತಿಯ ಮೇಲೆ ದಾಳಿ ನಡೆಸಿದೆ” ಎಂದು ಆರೋಪಿಸಿದ್ದಾರೆ. ಕಳೆದ 11 ವರ್ಷಗಳಿಂದ ಗ್ರಾಮೀಣ ಭಾಗದ ಬಡವರ ಹಿತಾಸಕ್ತಿಯನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದೆ ಎಂದೂ ಅವರು ಆರೋಪಿಸಿದ್ದಾರೆ.
20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ MGNREGA ಯೋಜನೆಯನ್ನು ಅವರು ಸ್ಮರಿಸಿದ್ದಾರೆ. ಅದು ಅಂತಹ ಕ್ರಾಂತಿಕಾರಕ ನಡೆಯಾಗಿತ್ತು. ಅದು ಶೋಷಿತ, ಅಂಚಿನ ಹಾಗೂ ಬಡವರಲ್ಲೇ ಅತಿ ಬಡವರ ಜೀವನದ ಮೂಲವಾಗಿ ಬದಲಾಗಿತ್ತು ಎಂದೂ ಅವರು ನೆನಪಿಸಿದ್ದಾರೆ.
ಮನರೇಗಾ ಯೋಜನೆಯಿಂದಾಗಿ ಉದ್ಯೋಗವನ್ನರಸಿ ನಡೆಯುತ್ತಿದ್ದ ವಲಸೆ ಸ್ಥಗಿತಗೊಂಡಿತ್ತು. ಉದ್ಯೋಗಕ್ಕೆ ಕಾನೂನಾತ್ಮಕ ಹಕ್ಕನ್ನು ಒದಗಿಸಲಾಗಿತ್ತು ಹಾಗೂ ಗ್ರಾಮ ಪಂಚಾಯತಿಗಳನ್ನು ಸಬಲೀಕರಣಗೊಳಿಸಲಾಗಿತ್ತು. ಮನರೇಗಾ ಯೋಜನೆಯ ಮೂಲಕ ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆಯನ್ನಿಡಲಾಗಿತ್ತು ಎಂದೂ ಅವರು ಹೇಳಿದ್ದಾರೆ.







