‘ನ್ಯಾಯದ ದೇವಾಲಯವಾಗಲಿ, 7 ಸ್ಟಾರ್ ಹೋಟೆಲ್ ಅಲ್ಲ’: ಬಾಂಬೆ ಹೈಕೋರ್ಟ್ ನ ಹೊಸ ಕಟ್ಟಡದ ಕುರಿತು ಸಿಜೆಐ ಗವಾಯಿ

ಸಿಜೆಐ ಬಿ.ಆರ್.ಗವಾಯಿ (File Photo: PTI)
ಮುಂಬೈ: ಮುಂಬರುವ ಹೊಸ ಬಾಂಬೆ ಹೈಕೋರ್ಟ್ ಸಂಕೀರ್ಣವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ನ್ಯಾಯದ ದೇವಾಲಯವಾಗಬೇಕು, ಅದು 7 ಸ್ಟಾರ್ ಹೋಟೆಲ್ ಆಗಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ಬಿ.ಆರ್.ಗವಾಯಿ ಹೇಳಿದ್ದಾರೆ.
ಬುಧವಾರ ಬಾಂದ್ರಾ(ಪೂರ್ವ)ದಲ್ಲಿ ಆಯೋಜಿಸಿದ್ದ ಹೊಸ ಹೈಕೋರ್ಟ್ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಗವಾಯಿ, ಹೊಸ ಸಂಕೀರ್ಣವು ದುಂದುಗಾರಿಕೆಯಿಂದ ಮುಕ್ತವಾಗಿದ್ದು, ಸಾಮಾನ್ಯ ನಾಗರಿಕರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಹೊಸ ಕಟ್ಟಡವು ದುಂದುವೆಚ್ಚದಿಂದ ಮುಕ್ತವಾಗಬೇಕು ಎಂದು ಸೂಚಿಸಿದ ಸಿಜೆಐ, “ನ್ಯಾಯಾಧೀಶರು ಇನ್ನು ಮುಂದೆ ಊಳಿಗಮಾನ್ಯ ಪ್ರಭುಗಳಲ್ಲ. ಅವರು ದೇಶದ ಕೊನೆಯ ಪ್ರಜೆಗೆ ಸೇವೆ ಸಲ್ಲಿಸಲು ನೇಮಿತರಾಗಿದ್ದಾರೆ. ಕಟ್ಟಡದ ವೈಭವಕ್ಕಿಂತ ನ್ಯಾಯದ ಸೇವೆಯೇ ಮುಖ್ಯ,” ಎಂದು ಹೇಳಿದರು.
ಹೊಸ ಕಟ್ಟಡ ದುಬಾರಿ ವಿನ್ಯಾಸದ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, “ಇಬ್ಬರು ನ್ಯಾಯಾಧೀಶರು ಹಂಚಿಕೊಳ್ಳಲು ಒಂದು ಲಿಫ್ಟ್ ನೀಡಲಾಗಿದೆ. ವಿಚಾರಣಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದೇ ಆಗಿರಬಹುದು, ಅವೆಲ್ಲವೂ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸನಾಂಗಗಳು ಸಂವಿಧಾನದಡಿ ದೇಶದ ಕಟ್ಟ ಕಡೆಯ ಪ್ರಜೆಗೂ ಸೇವೆ ಸಲ್ಲಿಸಲು ಕಾರ್ಯನಿರ್ವಹಿಸುತ್ತವೆ. ನಾವು ವೈಭವ ತೋರಿಸಲು ಅಲ್ಲ, ನ್ಯಾಯ ಒದಗಿಸಲು ಇಲ್ಲಿದ್ದೇವೆ,” ಎಂದರು.
“ನ್ಯಾಯಾಲಯ ಕಟ್ಟಡಗಳನ್ನು ವಿನ್ಯಾಸಗೊಳಿಸುವಾಗ, ನಾವು ನ್ಯಾಯಾಧೀಶರ ಅಗತ್ಯತೆಗಳತ್ತ ಹೆಚ್ಚು ಗಮನ ಕೊಡುತ್ತೇವೆ. ಆದರೆ, ನಾವು ಅಸ್ತಿತ್ವದಲ್ಲಿರುವುದು ದಾವೆದಾರರ ಹಾಗೂ ನಾಗರಿಕರ ಅಗತ್ಯಗಳಿಗಾಗಿ ಎಂಬುದನ್ನು ಮರೆಯಬಾರದು. ಈ ಕಟ್ಟಡವು ‘ನ್ಯಾಯದ ದೇವಾಲಯ’ವಾಗಬೇಕು, ‘7 ಸ್ಟಾರ್ ಹೋಟೆಲ್’ ಆಗಬಾರದು,” ಎಂದು ಸಿಜೆಐ ಗವಾಯಿ ಕಿವಿಮಾತು ಹೇಳಿದರು.
ಮೇ 14, 2025ರಂದು ಅಧಿಕಾರ ವಹಿಸಿಕೊಂಡ ಗವಾಯಿ, ನವೆಂಬರ್ 24ರಂದು ನಿವೃತ್ತಿಯಾಗಲಿದ್ದು, ಇದು ಮಹಾರಾಷ್ಟ್ರಕ್ಕೆ ಅವರ ಕೊನೆಯ ಅಧಿಕೃತ ಭೇಟಿ. “ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಇಷ್ಟವಿರಲಿಲ್ಲ. ಬಾಂಬೆ ಹೈಕೋರ್ಟ್ನಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದವನಾಗಿ, ದೇಶದ ಅತ್ಯಂತ ವಿಶಿಷ್ಟ ನ್ಯಾಯಾಲಯ ಕಟ್ಟಡಕ್ಕೆ ಅಡಿಪಾಯ ಹಾಕುವ ಭಾಗ್ಯ ನನಗೆ ಸಿಕ್ಕಿದೆ,” ಎಂದು ಅವರು ಭಾವುಕರಾದರು.
ಅವರು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸನಾಂಗವು ಸಂವಿಧಾನದ ತತ್ವಗಳಡಿ ಪರಸ್ಪರ ಸಹಕಾರದಿಂದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. “ನ್ಯಾಯಾಲಯದ ಚಿನ್ನದ ರಥದ ಎರಡು ಚಕ್ರಗಳು ‘ಬಾರ್’ ಮತ್ತು ‘ಬೆಂಚ್’,” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹೊಸ ಹೈಕೋರ್ಟ್ ಕಟ್ಟಡವು ಹಳೆಯ ಐತಿಹಾಸಿಕ ಬಾಂಬೆ ಹೈಕೋರ್ಟ್ ರಚನೆಗೆ ಪೂರಕವಾಗಲಿದೆ ಎಂದು ಹೇಳಿದರು. “1862ರಲ್ಲಿ ನಿರ್ಮಾಣವಾದ ಹಳೆಯ ಕಟ್ಟಡಕ್ಕೆ ಕೇವಲ 16,000 ರೂಪಾಯಿ ವೆಚ್ಚವಾಯಿತು ಮತ್ತು ಅದರಲ್ಲಿ 300 ರೂಪಾಯಿ ಉಳಿಯಿತು. ಹೊಸ ಕಟ್ಟಡವು ಆ ಪಾರಂಪರ್ಯವನ್ನು ಕಾಪಾಡಿಕೊಂಡು ಪ್ರಜಾಪ್ರಭುತ್ವದ ಶೈಲಿಯ ವಿನ್ಯಾಸದಲ್ಲಿರುತ್ತದೆ,” ಎಂದು ಅವರು ಹೇಳಿದರು.
ಹೊಸ ಕಟ್ಟಡದ ವಿನ್ಯಾಸಕ್ಕಾಗಿ ಖ್ಯಾತ ವಾಸ್ತುಶಿಲ್ಪಿ ಹಫೀಜ್ ಕಾಂಟ್ರಾಕ್ಟರ್ ಗೆ “ ಪ್ರಜಾಪ್ರಭುತ್ವದ ಆತ್ಮವನ್ನು ಪ್ರತಿಬಿಂಬಿಸುವ” ವಿನ್ಯಾಸ ರೂಪಿಸಲು ಸೂಚಿಸಲಾಗಿದೆ ಎಂದು ಫಡ್ನವೀಸ್ ಹೇಳಿದರು. “ಸರ್ಕಾರವೇ ಅತಿದೊಡ್ಡ ದಾವೆದಾರ, ಆದ್ದರಿಂದ ಸರ್ಕಾರಿ ಕಾನೂನು ಅಧಿಕಾರಿಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಲಾಗುತ್ತದೆ,” ಎಂದು ಅವರು ತಿಳಿಸಿದರು.
ಹೊಸ ಕಟ್ಟಡವು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿಗಳು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರೂ ಯೋಜನೆಯ ಮಹತ್ವವನ್ನು ಉಲ್ಲೇಖಿಸಿದರು. ಪವಾರ್ ಅವರ ಪ್ರಕಾರ, ಈಗಾಗಲೇ 15 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದ್ದು, ಉಳಿದ 15 ಎಕರೆ ಮಾರ್ಚ್ 2026ರೊಳಗೆ ನೀಡಲಾಗುತ್ತದೆ. ಶಿಂಧೆ ಅವರು 4,000 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಈ ಯೋಜನೆ “ಮುಂಬೈನ ಅತ್ಯಂತ ಐಕಾನಿಕ್ ನ್ಯಾಯಾಂಗ ಸಂಕೀರ್ಣ”ವಾಗಲಿದೆ ಎಂದು ಹೇಳಿದರು.
ಹೊಸ ಸಂಕೀರ್ಣವು ಒಟ್ಟು 50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು, ಅದು ಬಾಂದ್ರಾ (ಪೂರ್ವ)ಯಲ್ಲಿ ನಿರ್ಮಾಣವಾಗಲಿದೆ.







