ಇಂದು ನಮಗೆ ಆಗಿದ್ದು ನಾಳೆ ನಿತೀಶ್, ನಾಯ್ಡುಗೂ ಆಗಬಹುದು: ಆದಿತ್ಯ ಠಾಕ್ರೆ
“ಪ್ರಾದೇಶಿಕ ಪಕ್ಷವನ್ನು ಮುಗಿಸುವುದು ಬಿಜೆಪಿಯ ಕನಸು”

Photo | PTI
ಹೊಸದಿಲ್ಲಿ: ದೇಶದ ಪ್ರತಿಯೊಂದೂ ಪ್ರಾದೇಶಿಕ ಪಕ್ಷವನ್ನು ಒಡೆಯುವುದು ಮತ್ತು ಮುಗಿಸುವುದು ಬಿಜೆಪಿಯ ಕನಸಾಗಿರುವುದರಿಂದ ದೇಶದ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಶಿವಸೇನೆ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಗುರುವಾರ ಇಲ್ಲಿ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಮತ್ತು ಇವಿಎಂ ವಂಚನೆಗಳನ್ನು ಉಲ್ಲೇಖಿಸಿ ದೇಶದಲ್ಲಿಯ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದರು.
‘ಇಂದು ದೇಶದ ಭವಿಷ್ಯವು ಅನಿಶ್ಚಿತವಾಗಿದೆ. ಇಂದು ದೇಶದಲ್ಲಿ ಮತದಾರರ ಪಟ್ಟಿ ಮತ್ತು ಇವಿಎಂ ವಂಚನೆಗಳ ನಡುವೆ ನಮ್ಮ ಮತ ಎಲ್ಲಿಗೆ ಹೊಗುತ್ತಿದೆ ಎನ್ನುವುದು ನಮಗೆ ತಿಳಿದಿಲ್ಲ. ನಮ್ಮ ದೇಶದಲ್ಲಿ ಇಂದು ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಯುತ್ತಿವೆಯೇ? ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೇವೆ ಎಂದು ನಾವು ಭಾವಿಸಿದ್ದೇವೆ, ಆದರೆ ಅದು ಪ್ರಜಾಪ್ರಭುತ್ವವಾಗಿ ಉಳಿದಿಲ್ಲ. ಇಂದು ನಮಗೆ, ಕಾಂಗ್ರೆಸ್ ಗೆ ಮತ್ತು ಕೇಜ್ರಿವಾಲ್ ಗೆ ಆಗಿದ್ದು ನಾಳೆ ನಿತೀಶ್ ಕುಮಾರ್, ಆರ್ ಜೆ ಡಿ ಮತ್ತು ಚಂದ್ರಬಾಬು ನಾಯ್ಡುಗೂ ಆಗಬಹುದು ’ ಎಂದು ಹೇಳಿದ ಠಾಕ್ರೆ, ಬಿಜೆಪಿಯು ದೇಶದ ಸಂವಿಧಾನವನ್ನು ನಾಶ ಮಾಡಲು ಬಯಸಿರುವಂತೆ ಪ್ರತಿಯೊಂದೂ ಪ್ರಾದೇಶಿಕ ಪಕ್ಷವನ್ನು ನಾಶಗೊಳಿಸುವುದು ಅದರ ಕನಸಾಗಿದೆ ಎಂದರು.
‘ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ತನ್ನ ಭೇಟಿಯ ಕುರಿತಂತೆ ಅವರು, ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ. ಇಂಡಿಯಾ ಮೈತ್ರಿಕೂಟದ ಹಿರಿಯ ನಾಯಕರು ಈ ಕೆಲಸವನ್ನು ಮಾಡಲಿದ್ದಾರೆ. ಮೈತ್ರಿಕೂಟವು ಜಂಟಿ ನಾಯಕತ್ವವನ್ನು ಹೊಂದಿದೆ,ಇಲ್ಲಿ ಒಬ್ಬನೇ ನಾಯಕನಿಲ್ಲ. ನಮ್ಮ ಹೋರಾಟ ಪ್ರತಿಷ್ಠೆಗಾಗಿ ಅಥವಾ ಒಬ್ಬರ ಲಾಭಕ್ಕಾಗಲ್ಲ, ಅದು ದೇಶದ ಭವಿಷ್ಯಕ್ಕಾಗಿ ಹೋರಾಟವಾಗಿದೆ ’ ಎಂದೂ ಠಾಕ್ರೆ ಹೇಳಿದರು.







