ಏನಿದು ಕಚೇರಿ ಅವಧಿ ಮುಗಿದ ಮೇಲೆ ಸಂಪರ್ಕ ಕಡಿತದ ಕಾನೂನು? ಎಲ್ಲೆಲ್ಲಿ ಜಾರಿಯಲ್ಲಿದೆ?

ಸಾಂದರ್ಭಿಕ ಚಿತ್ರ | Photo Credit : freepik
ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯ ಪ್ರಕಾರ ಕಚೇರಿಯ ಅವಧಿ ಮುಗಿದ ಮೇಲೆ ಕೆಲಸ ಮಾಡಲು ಉದ್ಯೋಗಿಗಳು ನಿರಾಕರಿಸಬಹುದು. ಹಾಗೆ ಪ್ರತಿಕ್ರಿಯಿಸಿದಲ್ಲಿ ಅಧಿಕಾವಧಿ ಕೆಲಸ ಮಾಡಿದ್ದಕ್ಕಾಗಿ ವೇತನ ಕೊಡಬೇಕಾಗುತ್ತದೆ.
ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದ ಹೊಸ ಮಸೂದೆಯೊಂದನ್ನು ಇತ್ತೀಚೆಗೆ ಸಂಸತ್ತಿನ ಮುಂದಿಡಲಾಗಿದೆ. ಅದು ಸುಪ್ರಿಯಾ ಸುಲೆಯವರು ಸಂಸತ್ತಿನ ಮುಂದಿರಿಸಿದ ಕೆಲಸದ ಸಮಯದ ಬಳಿಕ ಸಂಪರ್ಕ ಕಡಿತಕ್ಕೆ ಸಂಬಂಧಿಸಿದ ಮಸೂದೆ. ಈ ಮಸೂದೆ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವಿನ ಗಡಿಗಳನ್ನು ಮಸುಕುಗೊಳಿಸುವ ನಿರಂತರ ಸಂಪರ್ಕದಲ್ಲಿರಬೇಕಾದ ಅನಿವಾರ್ಯತೆಯನ್ನು ಗುರಿಯಾಗಿಸಿದೆ.
ಕಚೇರಿ ಅವಧಿ ಮುಗಿದ ಬಳಿಕ ಉದ್ಯೋಗದಾತರಿಂದ ಬರುವ ಪರಿಣಾಮಗಳ ಭಯವಿಲ್ಲದೆ ಕರೆಗಳು, ಇಮೇಲ್ಗಳು ಮತ್ತು ಸಂದೇಶಗಳಿಂದ ಸ್ವಿಚ್ ಆಫ್ ಮಾಡುವ ಕಾನೂನು ಬದ್ಧ ಅಧಿಕಾರವನ್ನು ನೌಕರರು ಪಡೆಯುತ್ತಾರೆ.
►ಏನಿದು ರೈಟ್ ಟು ಡಿಸ್ಕನೆಕ್ಟ್ ಮಸೂದೆ?
ಈ ಮಸೂದೆಯ ಕಚೇರಿಯ ಅವಧಿ ಮುಗಿದ ಮೇಲೆ ಕೆಲಸ ಮಾಡಲು ಉದ್ಯೋಗಿಗಳು ನಿರಾಕರಿಸಬಹುದು. ಹಾಗೆ ಪ್ರತಿಕ್ರಿಯಿಸಿದಲ್ಲಿ ಅಧಿಕಾವಧಿ ಕೆಲಸ ಮಾಡಿದ್ದಕ್ಕಾಗಿ ವೇತನ ಕೊಡಬೇಕಾಗುತ್ತದೆ. ಕರೆಗೆ ಉತ್ತರಿಸದೆ ಇದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ. ಪರಸ್ಪರ ಒಪ್ಪಿಗೆಯಾದಲ್ಲಿ ಮಾತ್ರ ಸಂವಹನ ಮಾಡಬಹುದು. ಕೆಲಸ-ಜೀವನ ಸಮತೋಲನಕ್ಕೆ ಕೌನ್ಸಲಿಂಗ್ ಬೆಂಬಲ, ಡಿಜಿಟಲ್ ಡಿಟಾಕ್ಸ್ ಕೇಂದ್ರಗಳ ಸ್ಥಾಪನೆ, ಈ ನಿಯಮಗಳು ಅನುಸರಿಸದ ಕಂಪೆನಿಗಳಿಗೆ ದಂಡ ವಿಧಿಸುವುದು ಇತ್ಯಾದಿ ಸೌಲಭ್ಯಗಳಿವೆ.
►ಭಾರತದಲ್ಲಿ ಕೆಲಸದ ಸಂಸ್ಕೃತಿ ಬದಲಾಯಿಸಬಹುದಾದ ಮಸೂದೆ
ಕಚೇರಿ ಅವಧಿಯ ನಂತರದ ಸಂಪರ್ಕಗಳಿಗೆ ಕಂಪೆನಿಗಳು ಸ್ಪಷ್ಟವಾದ ನಿಯಮಗಳನ್ನು ರೂಪಿಸಬೇಕು ಎಂದು ಶಾಸನ ಕಡ್ಡಾಯಗೊಳಿಸಿದೆ. ತುರ್ತು ಅಲ್ಲದ ಸಂವಹನಗಳನ್ನು ಕಾರ್ಮಿಕರು ನಿರಾಕರಿಸಬಹುದು. ಪ್ರಸ್ತಾಪಿತ ಪ್ರಾಧಿಕಾರವು ದೂರುಗಳ ತನಿಖೆ ನಡೆಸಲಿದೆ. ಅನುಸರಣೆ ಮಾಡದ ಕಂಪೆನಿಗಳಿಗೆ ಶೇ 1ರಷ್ಟು ದಂಡಗಳನ್ನು ವಿಧಿಸಬಹುದು.
►ಜಾಗತಿಕವಾಗಿ ಹಲವು ದೇಶಗಳಲ್ಲಿ ಜಾರಿ
ಆಧುನಿಕ ಕಾರ್ಯಸ್ಥಳಗಳಲ್ಲಿ ಡಿಜಿಟಲ್ ಭಾರವನ್ನು ಹೊರುವ ಕೆಲಸಗಾರರಿಗೆ ನಿರಾಳವಾಗಲು ಹೊಸ ಪ್ರಸ್ತಾಪವನ್ನು ಇಡಲಾಗಿದೆ. ಫ್ರಾನ್ಸ್ ಇಂತಹ ಕಾನೂನು ತಂದ ಮೊದಲ ರಾಷ್ಟ್ರ. 2017ರಿಂದಲೇ ಫ್ರಾನ್ಸ್ನಲ್ಲಿ ಈ ಕಾನೂನು ಇದೆ. ಕಂಪೆನಿಗಳು ಮತ್ತು ಮುಖ್ಯವಾಗಿ ದೊಡ್ಡ ಕಂಪೆನಿಗಳು ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆಯಲ್ಲಿ ಈ ಕಾನೂನನ್ನು ಅಳವಡಿಸಬೇಕಿದೆ. 50ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಂಪೆನಿಗಳಿಗೆ ಇದು ಅನ್ವಯಿಸುತ್ತದೆ. ಕಾರ್ಮಿಕರು ಸಂಪರ್ಕ ಕಡಿತಗೊಳಿಸಬಹುದು ಮತ್ತು ಉದ್ಯೋಗದಾತರು ಅವರ ವಿರಾಮವನ್ನು ಗೌರವಿಸಬೇಕಾಗುತ್ತದೆ.
►ಪೋರ್ಚುಗಲ್ನಲ್ಲಿದೆ ಕಠಿಣ ಮಿತಿಗಳು
2021ರಲ್ಲಿ ಪೋರ್ಚುಗಲ್ ಈ ಕಾನೂನನ್ನು ಜಾರಿಗೆ ತಂದಿತ್ತು. ಅಲ್ಲಿ ಈ ಕಾನೂನನ್ನು ಉಲ್ಲಂಘಿಸಿದರೆ 9,690 ಯೂರೋಗಳಷ್ಟು ದಂಡ ಕಟ್ಟಬೇಕಾಗುತ್ತದೆ. ಅಲ್ಲಿನ ಕಾನೂನು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೂ ಅನ್ವಯಿಸುತ್ತದೆ. ಕಚೇರಿ-ಮನೆಗೆ ಸಾಗುವ ವೆಚ್ಚವನ್ನೂ ಕಾರ್ಮಿಕರಿಗೆ ನೀಡಬೇಕಾಗುತ್ತದೆ. ಗೌಪ್ಯತೆ ಕಸಿದು ಮೇಲ್ವಿಚಾರಣೆ ಮಾಡುವ ಸಾಧನಗಳನ್ನೂ ಅಲ್ಲಿ ನಿಷೇಧಿಸಲಾಗಿದೆ.
►ಇಟಲಿಯಲ್ಲಿ ಹೊಂದಾಣಿಕೆಯ ನಿಯಮವಿದೆ
2017ರಲ್ಲಿ ಇಟಲಿ ಸ್ಮಾರ್ಟ್ ವರ್ಕಿಂಗ್ ಕಾನೂನುಗಳನ್ನು ತಂದಿತ್ತು. ಕಂಪೆನಿಗಳು ಕಾರ್ಮಿಕರ ಜೊತೆಗಿನ ಒಪ್ಪಂದದಲ್ಲಿಯೇ ಸಂಪರ್ಕ ಕಡಿತದ ಅವಧಿಯನ್ನು ಉಲ್ಲೇಖಿಸಿರಬೇಕು. ಕಾರ್ಮಿಕ ಸಂಘಟನೆಗಳು ನಿಯಮಗಳನ್ನು ಚರ್ಚಿಸಿ ನಿರ್ಧರಿಸುತ್ತವೆ. ಸಂಪರ್ಕರಾಹಿತ್ಯಕ್ಕೆ ದಂಡವಿಲ್ಲದಿರುವುದನ್ನು ಖಚಿತಪಡಿಸುತ್ತಾರೆ. ಇದು ಸರ್ಕಾರಿ ಮತ್ತು ಖಾಸಗಿ ಎರಡೂ ಕಡೆ ಅನ್ವಯಿಸಿದೆ.
►ಚಳವಳಿಯ ಜೊತೆಗೂಡಿದ ಆಸ್ಟ್ರೇಲಿಯ
ಆಸ್ಟ್ರೇಲಿಯ 2024ರಲ್ಲಿ ಈ ನಿಯಮವನ್ನು ಅಳವಡಿಸಿಕೊಂಡಿದೆ. ಉದ್ಯೋಗಿಗಳು ಕಾರ್ಯಾವಧಿ ಮೀರಿದ ನಂತರ ಅನಗತ್ಯ ಸಂಪರ್ಕವನ್ನು ಅಲಕ್ಷಿಸಬಹುದಾಗಿದೆ. ವ್ಯಾಜ್ಯಗಳಿಗೆ ನ್ಯಾಯಮಂಡಳಿಗಳನ್ನು ರಚಿಸಲಾಗಿದೆ. ಆಸ್ಟ್ರೇಲಿಯದಲ್ಲಿ ಸಣ್ಣ ಕಂಪೆನಿಗಳಿಗೆ ಸಡಿಲಿಕೆ ತೋರಿಸಿದರೂ, ದೊಡ್ಡ ಕಂಪೆನಿಗಳು ಕಾನೂನು ಅನುಸರಿಸುತ್ತವೆ.







