ಬಿಹಾರ | ಪ್ರಧಾನಿ ಮೋದಿ ಸಮಾವೇಶದ ವೇಳೆ ಚಿರಾಗ್ ಪಾಸ್ವಾನ್ ರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದೇನು?

PC : NDTV
ಸಿವನ್ (ಬಿಹಾರ): ಬಿಹಾರದ ಸಿವನ್ ನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದ ವೇಳೆ, ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಆಗಮಿಸುವುದಕ್ಕೂ ಮುನ್ನ, ಬಿಹಾರದ ಸಿಎಂ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಪರಸ್ಪರ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ವರದಿ ಮಾಡಿರುವ NDTV, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನೀವೇನಾದರೂ ಸ್ಪರ್ಧಿಸಲಿದ್ದೀರಾ? ನೀವೇನಾದರೂ ಸ್ಪರ್ಧಿಸುವುದಿದ್ದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದೀರಿ ಎಂದು ಚಿರಾಗ್ ಪಾಸ್ವಾನ್ ರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದರು ಎಂದು ಹೇಳಿದೆ.
ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಚಿರಾಗ್ ಪಾಸ್ವಾನ್, “ಪ್ರಧಾನಿಗಳು ಇನ್ನೇನು ವೇದಿಕೆಗೆ ಬರಬೇಕು ಎನ್ನುವ ಹೊತ್ತಿನಲ್ಲಿ ನಾವಿಬ್ಬರೂ ಪರಸ್ಪರ ಒಟ್ಟಿಗೆ ನಿಂತಿದ್ದೆವು. ಈ ವೇಳೆ ಅಲ್ಲಿ ಮುಖ್ಯುಮಂತ್ರಿ ನಿತೀಶ್ ಕುಮಾರ್, ಲಲನ್ ಸಿಂಗ್ ಹಾಗೂ ಇನ್ನಿತರ ನಾಯಕರೂ ಉಪಸ್ಥಿತರಿದ್ದರು. ಆದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿತೀಶ್ ಕುಮಾರ್ ಹೇಳಲೇ ಇಲ್ಲ. ನಾವಿಬ್ಬರೂ ಮಾತುಕತೆ ನಡೆಸುವಾಗ, ನಾನು ಹೇಗೆ ಕೇಂದ್ರ ಸರಕಾರದಲ್ಲಿ ಕಾರ್ಯನಿರ್ವಹಿಸಿದೆ ಹಾಗೂ ರಾಜ್ಯ ರಾಜಕಾರಣಕ್ಕೆ ಮರಳಿ ಬಂದೆ ಎಂಬುದನ್ನು ಅವರು ನನಗೆ ವಿವರಿಸುತ್ತಿದ್ದರು” ಎಂದು ಸ್ಪಷ್ಟಪಡಿಸಿದ್ದಾರೆ.
ನಂತರ ಮಾತನಾಡಿದ ನಿತೀಶ್ ಕುಮಾರ್, ‘ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಚಿರಾಗ್ ಪಾಸ್ವಾನ್ ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ” ಎಂದು ಭವಿಷ್ಯ ನುಡಿದರು.
ಆದರೆ, “ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಬಿಹಾರದ ಜನತೆ ಹಾಗೂ ಪಕ್ಷ ಬಯಸಿದರೆ ಮಾತ್ರ ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ಹಾಗೇನಾದರೂ ಆದರೆ, ನಾನು ಆಶೀರ್ವಾದ ಪಡೆಯಲು ಬಿಹಾರದ ಮುಖ್ಯಮಂತ್ರಿಗಳ ಬಳಿಗೆ ಬರಲಿದ್ದೇನೆ” ಎಂದು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್ ಪಾಸ್ವಾನ್ ಬಣ)ದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದ್ದರು.
ಇದಕ್ಕೂ ಮುನ್ನ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ನನ್ನ ಬಯಕೆಯನ್ನು ನಿತೀಶ್ ಕುಮಾರ್ ನೇತೃತ್ವದ ಪಕ್ಷ ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎಂದು ಇತ್ತೀಚೆಗೆ ಚಿರಾಗ್ ಪಾಸ್ವಾನ್ ಬಹಿರಂಗಗೊಳಿಸಿದ್ದರು.







