ಮುಂಬೈ ರೈಲು ಸ್ಫೋಟ ಪ್ರಕರಣ | ‘ನಾನು ಮನೆ ಸೇರಿದಾಗ ನಾವೆಲ್ಲ ತುಂಬ ಅತ್ತೆವು’: ಗಲ್ಲು ಕುಣಿಕೆಯಿಂದ ಖುಲಾಸೆಯವರೆಗಿನ ಸಿದ್ದೀಕಿಯವರ ಪಯಣ

PC : thewire.in
ಮುಂಬೈ,ಜು.27: 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಮತ್ತು ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿದ್ದ ಏಳು ಜನರನ್ನು ಬಾಂಬೆ ಉಚ್ಚ ನ್ಯಾಯಾಲಯವು ಜು.21ರಂದು ಖುಲಾಸೆಗೊಳಿಸಿದೆ. 2011ರಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದ ಕಮಾಲ್ ಅನ್ಸಾರಿಯನ್ನು ಹೊರತುಪಡಿಸಿ ಉಳಿದ 11 ಜನರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಜೈಲಿನಲ್ಲಿಯ ಗಲ್ಲು ಶಿಕ್ಷೆಯ ಕುಣಿಕೆಯಿಂದ ಖುಲಾಸೆವರೆಗಿನ ತನ್ನ ಪಯಣವನ್ನು thewire.inಗೆ ವಿವರಿಸಿದ ಎಹ್ತೆಶಾಮ್ ಕುತುಬುದ್ದೀನ್ ಸಿದ್ದೀಕಿ ಅವರು ‘ನಾನು ಮನೆಯನ್ನು ತಲುಪಿದಾಗ ನಾವೆಲ್ಲರೂ ತುಂಬ ಅತ್ತೆವು’ ಎಂದು ಹೇಳಿದರು.
ಕೇಂದ್ರ ಕಾರಾಗೃಹದಲ್ಲಿ ‘ಫಾಂಸಿ ಯಾರ್ಡ್’ (ಗಲ್ಲುಶಿಕ್ಷೆ ಅಂಗಳ) ಎಂದು ಕರೆಯಲಾಗುವ ‘V’ ಆಕಾರದ ಆವರಣದೊಳಗಿನ 80 ಚದರದಡಿಯ ವಿಸ್ತೀರ್ಣದ ಕೋಣೆಯೇ ಸಿದ್ದೀಕಿಗೆ ಸುಮಾರು ಒಂದು ದಶಕಗಳ ಕಾಲ ‘ಮನೆ’ಯಾಗಿತ್ತು. 2015ರಲ್ಲಿ ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಂಕೋಕಾ) ನ್ಯಾಯಾಲಯವು 12 ಜನರಿಗೆ ಶಿಕ್ಷೆಯನ್ನು ಘೋಷಿಸಿದ ಬೆನ್ನಿಗೇ ಅವರನ್ನು ನಾಗಪುರ ಜೈಲಿಗೆ ರವಾನಿಸಲಾಗಿತ್ತು.
ದಶಕ ಕಾಲದ ಏಕಾಂತ ಬಂಧನವು ತನ್ನಲ್ಲಿ ‘ಸುರಕ್ಷಿತ’ ಎಂಬ ಭಾವನೆಯನ್ನು ಮೂಡಿಸಿತ್ತು ಎಂದು ಹೇಳಿದ ಸಿದ್ದೀಕಿ, ಪ್ರಚಲಿತ ರಾಜಕೀಯ ವಾತಾವರಣದಲ್ಲಿ, ವಿಶೇಷವಾಗಿ ಭಯೋತ್ಪಾದನೆ ಆರೋಪಗಳಲ್ಲಿ ಶಿಕ್ಷೆಗೆ ಗುರಿಯಾದ ಮುಸ್ಲಿಮ್ ವ್ಯಕ್ತಿಗಳಿಗೆ, ಈ ಪ್ರತ್ಯೇಕತೆಯು ಜೈಲಿನಲ್ಲಿ ಸುರಕ್ಷಿತವಾಗಿರಲು ಏಕೈಕ ಮಾರ್ಗವಾಗಿತ್ತು ಎಂದರು.
ಮುಂಬೈನಲ್ಲಿ ವಿಚಾರಣಾಧೀನ ಕೈದಿಯಾಗಿ ಒಂಭತ್ತು ವರ್ಷಗಳು ಮತ್ತು ನಂತರ ಮರಣ ದಂಡನೆಗೆ ಗುರಿಯಾದ ದೋಷಿಯಾಗಿ ನಾಗ್ಪುರ ಜೈಲಿನಲ್ಲಿ, ಹೀಗೆ ತನ್ನ ಎರಡು ದಶಕಗಳ ಜೈಲು ವಾಸವನ್ನು ನೆನಪಿಸಿಕೊಂಡ ಸಿದ್ದೀಕಿ, ವಿಚಾರಣೆಯು ಸುಮಾರು ಒಂದು ದಶಕವನ್ನು ತೆಗೆದುಕೊಂಡಿದ್ದರೂ ವಿಚಾರಣಾಧೀನ ಕೈದಿಯಿಂದ ಗಲ್ಲುಶಿಕ್ಷೆಗೆ ಗುರಿಯಾದ ಕೈದಿಯಾಗಿ ಬದಲಾವಣೆಯು ದಿಢೀರನೆ ಆಗಿತ್ತು ಎಂದರು.
‘ಕೆಳ ನ್ಯಾಯಾಲಯದ ತೀರ್ಪು ಬರುವವರೆಗೂ ನಾವು ಮುಂಬೈ ಜೈಲಿನ ಕಿಕ್ಕಿರಿದು ತುಂಬಿದ್ದ ಬ್ಯಾರಕ್ ಗಳಲ್ಲಿ ಜಾಗಕ್ಕಾಗಿ ಹೋರಾಡುತ್ತಿದ್ದೆವು ಮತ್ತು ಏಕಾಏಕಿ ನಮ್ಮನ್ನು ಏಕಾಂತ ಬಂಧನಕ್ಕೆ ತಳ್ಳಲಾಗಿತ್ತು. ಅದು ಅತ್ಯಂತ ಚಿಕ್ಕ ಕೋಣೆಯಾಗಿತ್ತು. ಆದರೂ ಅದು ನಮ್ಮದೇ ಆಗಿತ್ತು. ಅದಕ್ಕೆ ಹೊಂದಿಕೊಂಡಂತೆ ಬಾತ್ ರೂಮ್ ಇತ್ತು. ಸೀಲಿಂಗ್ ಫ್ಯಾನ್ ಮತ್ತು ಟ್ಯೂಬ್ಲೈಟ್ ಇದ್ದವು’, ಎಂದು ಸಿದ್ದೀಕಿ ಹೇಳಿದರು.
ತನ್ನ ಅಕ್ಕಪಕ್ಕದ 30 ಸಣ್ಣಕೋಣೆಗಳಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಹಲವರನ್ನು ಇರಿಸಲಾಗಿತ್ತು. ಹೆಚ್ಚಿನವರಿಗೆ ಸರಿಯಾದ ಕಾನೂನು ಪ್ರಾತಿನಿಧ್ಯದ ಕೊರತೆಯಿತ್ತು. ವಿಚಾರಣಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿದ ಬಳಿಕ ಅವರನ್ನು ಇಲ್ಲಿಗೆ ಸಾಗಹಾಕಲಾಗಿತ್ತು. ಇಲ್ಲಿಗೆ ತಲುಪಿದ ತಕ್ಷಣ ತಮ್ಮನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ಭೀತಿಯೊಂದಿಗೇ ಕೈದಿಗಳು ಇಲ್ಲಿಗೆ ಬರುತ್ತಾರೆ ಎಂದು ಸಿದ್ದೀಕಿ ಹೇಳಿದರು.
‘ನಾವು ನಿರಪರಾಧಿಗಳು ಎನ್ನುವುದು ಕೊನೆಗೂ ಸಾಬೀತಾಗಲಿದೆ ಎಂಬ ಭರವಸೆ ನಮಗೆ ಜೈಲಿನಲ್ಲಿ ಆಶಾಕಿರಣವಾಗಿತ್ತು. ಎಷ್ಟಾದರೂ ನ್ಯಾಯವು ಎಷ್ಟು ಸಮಯ ನಮ್ಮಿಂದ ತಪ್ಪಿಸಿಕೊಳ್ಳಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.
‘ರೈಲು ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟಿದ್ದ ಹೆಚ್ಚಿನವರು ಬಂಧನದ ಸಮಯದಲ್ಲಿ ನನಗೆ ಅಪರಿಚಿತರಾಗಿದ್ದರು. ಆದರೆ ಸಂದರ್ಭಗಳು ನಮ್ಮನ್ನು ಹತ್ತಿರಕ್ಕೆ ತರುತ್ತಿದ್ದಂತೆ ಅಂತಿಮವಾಗಿ ನಾವೆಲ್ಲ ಪರಸ್ಪರರಿಗೆ ಬೆಂಬಲ ನೀಡುವವರಾಗಿ ಮಾರ್ಪಟಿದ್ದೆವು’, ಎಂದು ಸಿದ್ದೀಕಿ ನೆನಪಿಸಿಕೊಂಡರು.
ನಾಗ್ಪುರ ಜೈಲಿನಲ್ಲಿದ್ದಾಗ ಸಿದ್ದೀಕಿ ತನ್ನ ಜೈಲಿನ ಬದುಕು ಮತ್ತು ವಿಫಲ ವಿಚಾರಣೆಯನ್ನು ವಿವರಿಸಿ ‘ಹಾರರ್ ಸಾಗಾ (ಭಯಾನಕ ಕಥೆ)’ ಎಂಬ ಕೃತಿಯನ್ನು ರಚಿಸಿದ್ದು, ಅದು ಕಳೆದ ವರ್ಷ ಪ್ರಕಟಗೊಂಡಿತ್ತು. ತನ್ನ ಮುಂದಿನ ಕೃತಿಗಾಗಿ ಹಸ್ತಪ್ರತಿಯನ್ನು ಅವರು ಸಿದ್ಧಗೊಳಿಸಿದ್ದಾರೆ. ಬಂಧನದಲ್ಲಿದ್ದಾಗ ಹಲವಾರು ಇತರ ಪುಸ್ತಕಗಳನ್ನೂ ಅವರು ಅನುವಾದಿಸಿದ್ದರು.
ಬಂಧನದ ಸಮಯದಲ್ಲಿ ಅರ್ಧದಲ್ಲಿಯೇ ಕಾಲೇಜು ಶಿಕ್ಷಣವನ್ನು ತೊರೆದಿದ್ದ ಸಿದ್ಧಿಕಿ ಜೈಲಿನಲ್ಲಿದ್ದುಕೊಂಡೇ ವ್ಯಾಸಂಗವನ್ನು ಮುಂದುವರಿಸಿ ಸ್ನಾತಕೋತ್ತರ, ಡಿಪ್ಲೋಮಾ ಸೇರಿದಂತೆ 20ಕ್ಕೂ ಅಧಿಕ ಪದವಿಗಳನ್ನು ಗಳಿಸಿದ್ದಾರೆ. ಪ್ರಸ್ತುತ ಮೂರು ವರ್ಷಗಳ ಕಾನೂನು ಪದವಿ ಶಿಕ್ಷಣದ ಅಂತಿಮ ಸೆಮಿಸ್ಟರ್ ನಲ್ಲಿದ್ದಾರೆ.
ಬಂಧನದ ಸಮಯದಲ್ಲಿ ಸಿದ್ಧಿಕಿ ಮುಂಬೈನ ಮೀರಾ ರೋಡ್ ನಿವಾಸಿಯಾಗಿದ್ದರು. ಆದರೆ ಈಗ ತನ್ನ ಕುಟುಂಬದೊಂದಿಗೆ ಉತ್ತರ ಪ್ರದೇಶದ ಜೌನಪುರ ಜಿಲ್ಲೆಯ ಯೂನುಸ್ ಪುರದಲ್ಲಿ ವಾಸವಾಗಿದ್ದಾರೆ. 2006ರಲ್ಲಿ ಬಂಧಿಸಲ್ಪಟ್ಟಾಗ ಸಿದ್ದೀಕಿ ಮತ್ತು ಸಬೀನಾರ ವಿವಾಹವಾಗಿ ಒಂದು ವರ್ಷವೂ ಕಳೆದಿರಲಿಲ್ಲ. ಸಿದ್ಧಿಕಿಗೆ ಆಗ ಕೇವಲ 23 ವರ್ಷ ವಯಸ್ಸಾಗಿದ್ದರೆ ಸಬೀನಾ ಇನ್ನೂ ಚಿಕ್ಕವರಾಗಿದ್ದರು.
‘ಯೂನುಸ್ ಪುರಕ್ಕೆ ಮರಳುವುದು ಅತ್ಯಂತ ಭಾವನಾತ್ಮಕವಾಗಿತ್ತು. ನಾನು ಮನೆಯನ್ನು ತಲುಪಿದ ಬಳಿಕ ಹಲವಾರು ಗಂಟೆಗಳ ಕಾಲ ನಾವು ಅಳುತ್ತಲೇ ಇದ್ದೆವು. ಮಾತನಾಡಲು ನಮಗೆ ಸಾಧ್ಯವಾಗಿರಲಿಲ್ಲ’ ಎಂದು ಸಿದ್ದೀಕಿ ಹೇಳಿದರು.
ಈಗ ಸಿದ್ದೀಕಿ ಅವರ ಮನೆಗೆ ಸಂಬಂಧಿಕರು, ಹಿತೈಷಿಗಳು ಹಾಗೂ ನೆರವು ನೀಡಿದವರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. "ಅವರೆಲ್ಲ ನನಗೆ ಅಪರಿಚಿತ ಮುಖಗಳು. ಅವರ ಮುಖ ನೋಡಿದ ನೆನಪಾಗುತ್ತಿಲ್ಲ. ಅವರಿಗೆ ಅದು ಮುಜುಗರ ತರದಿರಲಿ ಎಂದು ನಾನೇ, ಪರಿಚಿತರು ಎಂಬಂತೆ ತಲೆಯಾಡಿಸುತ್ತೇನೆ. ಜೈಲಿನ ಅವಧಿಯಲ್ಲಿ ಅವರು ನನ್ನ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದರು. ಈಗ, ಅವರು ನಾನು ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸಲು ಇಲ್ಲಿದ್ದಾರೆ" ಎಂದು ಸಿದ್ದೀಕಿ ಹೇಳಿದರು.
ಸಿದ್ದೀಕಿ ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟವಿಲ್ಲ. "ಉದ್ಯೋಗ ದೊರಕುವುದು ಸವಾಲಿನ ಕೆಲಸವಾಗಬಹುದು. ನಾನು ಕಾನೂನು ವೃತ್ತಿಗೆ ಮರಳುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ," ಎಂದು ಅವರು ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದರು. ಇಷ್ಟು ವರ್ಷಗಳಿಂದ ನಾನು ನನ್ನೊಳಗೆ ಇರಿಸಿಕೊಂಡಿದ್ದ ಅನೇಕ ಕಥೆಗಳು ಇವೆ. ಅವುಗಳನ್ನು ಈಗ ಬರೆಯಲು ಬಯಸುತ್ತೇನೆ," ಎಂದರು.
2006 ರ ಜುಲೈ 11 ರಂದು ನಡೆದ ಮುಂಬೈ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ತೀರ್ಪಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಆದರೆ, ಆರೋಪಿಗಳನ್ನು ಪುನಃ ಜೈಲಿಗೆ ಕಳುಹಿಸುವ ಅಗತ್ಯವಿಲ್ಲ ಎಂಬುದಾಗಿ ಪೀಠ ಸ್ಪಷ್ಟಪಡಿಸಿದೆ.







