Thiruvananthapuram | ಮೇಯರ್ ಹುದ್ದೆಗೆ BJPಯಿಂದ ‘ರೈಡ್ ಶ್ರೀಲೇಖಾ’ ಹೆಸರು ಮುಂಚೂಣಿಯಲ್ಲಿ

Photo Credit : NDTV
ತಿರುವನಂತಪುರಂ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿವೃತ್ತ IPS ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಆರ್. ಶ್ರೀಲೇಖಾ ಅವರು ಎಡಪಂಥೀಯ ಪ್ರತಿಸ್ಪರ್ಧಿಯನ್ನು ಸುಮಾರು 700 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 1987ರ ಬ್ಯಾಚ್ ನ ಕೇರಳ ಕೇಡರ್ IPS ಅಧಿಕಾರಿ ಆಗಿದ್ದ ಅವರು ಶನಿವಾರ ಸಸ್ತಮಂಗಲಂ ವಾರ್ಡ್ನಿಂದ ಆಯ್ಕೆಯಾಗಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಜಯಗಳಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ, ಕೇರಳ ರಾಜಧಾನಿಗೆ ಮೊದಲ ಬಿಜೆಪಿ ಮೇಯರ್ ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ‘ರೈಡ್ ಶ್ರೀಲೇಖಾ’ ಎಂದೇ ಪ್ರಸಿದ್ಧರಾದ ಆರ್. ಶ್ರೀಲೇಖಾ ಅವರ ಹೆಸರು ಮೇಯರ್ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದೆ.
1960ರ ಡಿಸೆಂಬರ್ 25ರಂದು ತಿರುವನಂತಪುರಂನಲ್ಲಿ ಜನಿಸಿದ ಶ್ರೀಲೇಖಾ, ಕಾಟನ್ಹಿಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಮಹಿಳಾ ಕಾಲೇಜು ಹಾಗೂ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಅವರು, ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಸೇವೆ ಸಲ್ಲಿಸಿದ್ದರು. ಉತ್ತಮ ಉದ್ಯೋಗದಲ್ಲಿದ್ದರೂ ಅವರು 1987ರಲ್ಲಿ ಪೊಲೀಸ್ ಸೇವೆಯನ್ನು ಆಯ್ದುಕೊಂಡರು.
ಕೇರಳದ ಪ್ರಮುಖ ಮಹಿಳಾ IPS ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಶ್ರೀಲೇಖಾ, ಚೆರ್ತಲಾ, ತ್ರಿಶೂರ್, ಪತ್ತನಂತಿಟ್ಟ ಹಾಗೂ ಆಲಪ್ಪುಳ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ಸಿಬಿಐನಲ್ಲಿ ಡಿಐಜಿ ಆಗಿ ಆರ್ಥಿಕ ಅಪರಾಧಗಳ ತನಿಖೆ ನಡೆಸಿದ ಅವಧಿಯಲ್ಲಿ ದಿಢೀರ್ ದಾಳಿಗಳ ಮೂಲಕ ಅವರು ಹೆಸರು ಗಳಿಸಿದರು. ಈ ಕಾರಣದಿಂದಲೇ ಅವರಿಗೆ ‘ರೈಡ್ ಶ್ರೀಲೇಖಾ’ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು. 2007ರಲ್ಲಿ ಅವರಿಗೆ ಕೇರಳ ಸರ್ಕಾರದಿಂದ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪೊಲೀಸ್ ಪಡೆಯಲ್ಲಿನ ಮಹಿಳಾ ಪ್ರಾತಿನಿಧ್ಯ ವೃದ್ಧಿಗೆ ಅವರು ನಿರಂತರವಾಗಿ ಶ್ರಮವಹಿಸಿದ್ದರು. ಪಿಎಸ್ಸಿ ನೇಮಕಾತಿಯಲ್ಲಿ ಲಿಂಗಸಮಾನತೆಯ ಬೇಡಿಕೆಯನ್ನು ಮುಂದಿಟ್ಟ ಪರಿಣಾಮ, ಪೊಲೀಸ್ ಪಡೆಯಲ್ಲಿ ಮಹಿಳೆಯರ ಪಾಲು ಶೇ.4ರಿಂದ ಶೇ.9ಕ್ಕಿಂತ ಹೆಚ್ಚಾಗಿದೆ.
ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಅಪರಾಧ ವಿಭಾಗದ ಮುಖ್ಯಸ್ಥರಾಗಿ, 2013ರ ‘ಆಪರೇಷನ್ ಅನ್ನಪೂರ್ಣ’ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಅವರು ಮುನ್ನಡೆಸಿದರು. 2003ರ ಕಿಲಿರೂರ್ ಲೈಂಗಿಕ ಹಗರಣದ ತನಿಖೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಕೇರಳದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಬಳಿಕ, 33 ವರ್ಷಗಳ ಸೇವೆಯ ನಂತರ ಅವರು 2020ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ತಟಸ್ಥ ನಿಲುವು ಕಾಯ್ದುಕೊಂಡಿದ್ದ ಶ್ರೀಲೇಖಾ, ಅಕ್ಟೋಬರ್ 2024ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಪ್ರೇರಿತವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.







