16 ಕೋಟಿ ರೂ. ಸಾಲ, ಆತ್ಮಹತ್ಯೆ ಒಪ್ಪಂದ : ಕೋಲ್ಕತ್ತಾದ ಒಂದೇ ಕುಟುಂಬದ ಮೂವರ ʼಕೊಲೆ ರಹಸ್ಯʼ ಬಹಿರಂಗ
ಆತ್ಮಹತ್ಯೆ ಯತ್ನ ವಿಫಲವಾದ ಬಳಿಕ ಜೀವನ ಕೊನೆಗೊಳಿಸಲು ʼಫ್ಲಾನ್-ಬಿʼ ರೂಪಿಸಿದ ಕುಟುಂಬ!

Photo | NDTV
ಕೋಲ್ಕತ್ತಾ : ಕೋಲ್ಕತ್ತಾ ಹೊರವಲಯದ ತಂಗ್ರಾದಲ್ಲಿ ನಡೆದ ಒಂದೇ ಕುಟುಂಬದ ಮೂವರ ಸಂಶಯಾಸ್ಪದ ಸಾವು ಮತ್ತು ಅಪಘಾತ ಪ್ರಕರಣ ಕುರಿತು ತನಿಖೆಯ ವೇಳೆ 16 ಕೋಟಿ ಸಾಲವನ್ನು ತೀರಿಸಲಾಗದೆ ಕುಟುಂಬವು ʼಸಾಮೂಹಿಕ ಆತ್ಮಹತ್ಯೆʼಗೆ ಪ್ರಯತ್ನಿಸಿದೆ ಎಂಬುವುದು ಬಹಿರಂಗವಾಗಿದೆ.
ತಾಂಗ್ರಾದಲ್ಲಿ ಪ್ರಣಯ್ ಮತ್ತು ಪ್ರಸೂನ್ ಡೇ ಎಂಬ ಸಹೋದರರು ತಮ್ಮ ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರಸೂನ್ ಡೇ ಮತ್ತು ರೋಮಿ ಡೇ ದಂಪತಿಗೆ ಪ್ರಿಯಾಂಬದ ಎಂಬ ಪುತ್ರಿ ಹಾಗೂ ಪ್ರಣಯ್ ಮತ್ತು ಸುದೇಷ್ನಾ ಡೇ ದಂಪತಿಗೆ ಪ್ರತೀಕ್ ಎಂಬ ಪುತ್ರನಿದ್ದ. ಚರ್ಮೋದ್ಯಮವನ್ನು ನಡೆಸುತ್ತಿದ್ದ ಈ ಕುಟುಂಬವು ಹಣಕಾಸು ಸಮಸ್ಯೆಗೆ ಸಿಲುಕಿತ್ತು. ಇದರಿಂದ ಕುಟುಂಬವು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದೆ. ಆದರೆ ತಮ್ಮ ಸಾಮೂಹಿಕ ಆತ್ಮಹತ್ಯಾ ಯೋಜನೆಯು ವಿಫಲವಾದ ಕಾರಣ ಕೊನೆಗೆ ʼಕೊಲೆ ಮತ್ತು ಅಪಘಾತʼದ ಹಾದಿಯನ್ನು ಹಿಡಿದಿದ್ದಾರೆ.
ತಂಗ್ರಾದಲ್ಲಿ ಫೆ.19ರಂದು ಇಬ್ಬರು ಮಹಿಳೆಯರು ಮತ್ತು ಓರ್ವ ಬಾಲಕಿ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಹಿಳೆಯರ ಪತಿಯಂದಿರು ಮತ್ತು ಇನ್ನೋರ್ವ ಬಾಲಕ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಇದೊಂದು ʼಸಾಮೂಹಿಕ ಆತ್ಮಹತ್ಯೆ ಯತ್ನʼ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.
ಮಗಳ ಕೊಲೆಗೆ ಪತಿಗೆ ಸಹಾಯ ಮಾಡಿದ ಪತ್ನಿ!
ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿತ್ತು. ಇದರಿಂದ ಫೆಬ್ರವರಿ 17ರಂದು ʼಪಾಯಸʼದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಣಯ್ ಮತ್ತು ಪ್ರಸೂನ್ ಡೇ ಮತ್ತು ಅವರಿಬ್ಬರ ಪತ್ನಿ ಮತ್ತು ಮಕ್ಕಳು ಸೇವಿಸಿದರು. ಆದರೆ ಮರು ದಿನ ಅವರೆಲ್ಲರೂ ಜೀವಂತವಾಗಿ ಎಚ್ಚರಗೊಂಡರು. ಕುಟುಂಬದ ಆತ್ಮಹತ್ಯೆ ಯತ್ನ ವಿಫಲವಾಯಿತು.
ಆಗ ಪ್ರಣಯ್, ಪ್ರಸೂನ್ ಡೇ, ರೋಮಿ ಡೇ, ಸುದೇಷ್ನಾ ಡೇ ಸೇರಿಕೊಂಡು ತಮ್ಮ ಎರಡನೇ ತಂತ್ರವನ್ನು ಮಾಡಿದರು. ಅದೇ ʼಪ್ಲಾನ್-ಬಿʼ. ಈ ʼಪ್ಲಾನ್-ಬಿʼ ಭಾಗವಾಗಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಪರಸ್ಪರ ಸಹಾಯ ಮಾಡುವ ನಿರ್ಧಾರಕ್ಕೆ ಬಂದರು. ಆದರೆ ಹೆತ್ತವರ ಈ ಯೋಜನೆ ಬಗ್ಗೆ ಪ್ರಿಯಾಂಬದ ಮತ್ತು ಪ್ರತೀಕ್ಗೆ ತಿಳಿದಿರಲಿಲ್ಲ.
ಪ್ರಸೂನ್ ಡೇ ಮೊದಲು ತನ್ನ ಪುತ್ರಿ ಪ್ರಿಯಾಂಬದಳನ್ನು ತಲೆದಿಂಬಿನಿಂದ ಉಸಿರು ಕಟ್ಟಿಸಿ ಕೊಲೆ ಮಾಡಿದನು. ಈ ವೇಳೆ ಪತ್ನಿ ರೋಮಿ ಡೇ ಮಗಳ ಕಾಲನ್ನು ಹಿಡಿದು ಕೊಲೆಗೆ ಪತಿಗೆ ಸಹಾಯ ಮಾಡಿದರು. ಬಳಿಕ ಪತ್ನಿ ರೋಮಿ ತನ್ನ ಮಣಿಕಟ್ಟುಗಳನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆದರೆ, ಆಕೆಯ ಪ್ರಯತ್ನ ವಿಫಲವಾಯಿತು. ಈ ವೇಳೆ ಪ್ರಸೂನ್ ಡೇ ಪತ್ನಿಯ ಮಣಿಕಟ್ಟು ಮತ್ತು ಕತ್ತು ಸೀಳಿ ಕೊಲೆ ಮಾಡಿದನು. ನಂತರ ತನ್ನ ಅತ್ತಿಗೆಯನ್ನು ಅದೇ ರೀತಿಯಲ್ಲಿ ಪ್ರಸೂನ್ ಡೇ ಕೊಲೆ ಮಾಡಿದನು.
ಆ ಬಳಿಕ ಪ್ರಸೂನ್ ಡೇ ತನ್ನ ಸಹೋದರ ಮತ್ತು ಆತನ ಪುತ್ರ ಪ್ರತೀಕ್ ಜೊತೆ ಕಾರಿನಲ್ಲಿ ಮನೆಯಿಂದ ಹೊರಟರು. 3 ಗಂಟೆಯ ನಂತರ ವರ್ತುಲ ರಸ್ತೆಯ ಪೂರ್ವ ಮಹಾನಗರ ಬೈಪಾಸ್ ನ ಅಭಿಷಿಕ್ತ ಕ್ರಾಸಿಂಗ್ ಬಳಿ ಕಾರು ಪಿಲ್ಲರ್ಗೆ ಢಿಕ್ಕಿ ಹೊಡೆದಿದೆ. ಆದರೆ, ಅಪಘಾತದಲ್ಲಿ ಮೂವರು ಕೂಡ ಬದುಕುಳಿದರು.
ಆದರೆ, ವಿಚಾರಣೆಯ ವೇಳೆ ʼಇದು ನಮ್ಮ ಆತ್ಮಹತ್ಯೆ ಪ್ರಯತ್ನʼ ಎಂದು ಪ್ರಸೂನ್ ಮತ್ತು ಪ್ರಣಯ್ ಡೇ ಹೇಳಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಪ್ರಸೂನ್ ಮತ್ತು ಪ್ರಣಯ್ ಡೇ ಅವರನ್ನು ಪೊಲೀಸರು ಕೋಲ್ಕತ್ತಾದ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
16 ಕೋಟಿ ರೂ. ಸಾಲ :
ಚರ್ಮೋದ್ಯಮವನ್ನು ನಡೆಸುತ್ತಿದ್ದ ಕುಟುಂಬವು ಇತ್ತೀಚೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸಿದೆ. ವಿಚಾರಣೆಯ ವೇಳೆ ಕುಟುಂಬದ ಮೇಲೆ 16 ಕೋಟಿ ರೂ. ಸಾಲದ ಹೊರೆ ಇತ್ತು, ಮೂರು ಕಾರುಗಳ ಪೈಕಿ ಎರಡರ ಸುಮಾರು 47 ಲಕ್ಷ ರೂ. ಇಎಂಐಗಳು ಬಾಕಿ ಉಳಿದಿವೆ. ಇದರಿಂದ ಆತ್ಮಹತ್ಯೆ ಮಾಡಲು ನಿರ್ಧಾರಿಸಿದೆವು ಎಂದು ಪ್ರಸೂನ್ ಡೇ ವಾಸ್ತವ ಬಿಚ್ಚಿಟ್ಟರು.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕೋಲ್ಕತ್ತಾ ಪೊಲೀಸರು ವಿಚಾರಣೆ ನಡೆಸಿ ಪ್ರಸೂನ್ ಡೇ ಅವರನ್ನು ಬಂಧಿಸಿದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಅವರನ್ನು ಮಾರ್ಚ್ 6ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ.







