"ಅವರು ಕೋಟಾದಲ್ಲಿ ಮಾತ್ರ ಏಕೆ ಸಾಯುತ್ತಿದ್ದಾರೆ?": ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ರಾಜಸ್ಥಾನವನ್ನು ಟೀಕಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತಿರುವ ಬಗ್ಗೆ ಶುಕ್ರವಾರ ರಾಜಸ್ಥಾನ ಸರಕಾರವನ್ನು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯವು, ಪರಿಸ್ಥಿತಿಯು ಗಂಭೀರವಾಗಿದೆ ಎಂದು ಹೇಳಿದೆ.
ಈ ವರ್ಷ ಇಲ್ಲಿಯವರೆಗೆ ಕನಿಷ್ಠ 14 ಪ್ರಕರಣಗಳು ದಾಖಲಾಗಿವೆ ಎಂದು ರಾಜಸ್ಥಾನ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಸಾವುಗಳು ಏಕೆ ಸಂಭವಿಸುತ್ತಿವೆ ಎಂದು ನ್ಯಾಯಾಲಯವು ಪ್ರಶ್ನಿಸಿತು.
ಇದೇ ವೇಳೆ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಕಾರ್ಯಪಡೆಗೆ ತನ್ನ ವರದಿಯನ್ನು ಸಲ್ಲಿಸಲು ಸಮಯ ಬೇಕಾಗುತ್ತದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತು.
‘ಒಂದು ಸರಕಾರವಾಗಿ ನೀವೇನು ಮಾಡುತ್ತಿದ್ದೀರಿ? ಕೋಟಾದಲ್ಲಿ ಮಾತ್ರ ಏಕೆ ಈ ಮಕ್ಕಳು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ? ಒಂದು ಸರಕಾರವಾಗಿ ನೀವು ಈ ಬಗ್ಗೆ ಯೋಚಿಸಿಲ್ಲವೇ?’ ಎಂದು ನ್ಯಾ.ಪರ್ಡಿವಾಲಾ ಪ್ರಶ್ನಿಸಿದರು.
ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಸರಕಾರದ ಪರ ವಕೀಲರು ತಿಳಿಸಿದರು.
ಇಂಜನಿಯರಿಂಗ್,ಮೆಡಿಕಲ್ ಮತ್ತು ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವ ಹಲವಾರು ಕೋಚಿಂಗ್ ಸೆಂಟರ್ಗಳು ಕೋಟಾದಲ್ಲಿದ್ದು,ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ನೀಟ್ ಆಕಾಂಕ್ಷಿಯೋರ್ವರು ಕೋಟಾದಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣವನ್ನೂ ಶುಕ್ರವಾರ ಉಲ್ಲೇಖಿಸಿದ ಸರ್ವೋಚ್ಚ ನ್ಯಾಯಾಲಯವು,ಎಫ್ಐಆರ್ ದಾಖಲಿಸದೇ ಸರಕಾರವು ನ್ಯಾಯಾಂಗ ನಿಂದನೆಯನ್ನು ಎಸಗಿದೆ ಎಂದು ಆರೋಪಿಸಿತು.
ವಿದ್ಯಾರ್ಥಿನಿಯು ನ.2024ರಿಂದ ಸಂಸ್ಥೆಯ ಹಾಸ್ಟೆಲ್ ಬದಲಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದರೂ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುವುದು ಕಡ್ಡಾಯವಾಗಿತ್ತು ಎಂದು ಹೇಳಿದ ಪೀಠವು,ಸಂಬಂಧಿತ ವ್ಯಾಪ್ತಿಯ ಪೋಲಿಸ್ ಠಾಣಾಧಿಕಾರಿ ತನ್ನ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ,ಈ ನ್ಯಾಯಾಲಯವು ಹೊರಡಿಸಿದ್ದ ನಿರ್ದೇಶನಗಳನ್ನು ಅವರು ಪಾಲಿಸಿಲ್ಲ ಎಂದು ಕಿಡಿಕಾರಿತು.
ಮೇ 4ರಂದು ಪ.ಬಂಗಾಳದ ಖರಗಪುರದ ಐಐಟಿಯಲ್ಲಿ 22ರ ಹರೆಯದ ವಿದ್ಯಾರ್ಥಿಯ ಸಾವಿನ ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ರಾಜ್ಯ ಸರಕಾರವನ್ನು ಟೀಕಿಸುವ ಜೊತೆಗೆ ಪೀಠವು,ಐಐಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ನಾಲ್ಕು ದಿನಗಳ ವಿಳಂಬಕ್ಕಾಗಿ ಪಶ್ಚಿಮ ಬಂಗಾಳ ಪೋಲಿಸರನ್ನೂ ತರಾಟೆಗೆತ್ತಿಕೊಂಡಿತು.
ಮೇ 6ರಂದು ಸರ್ವೋಚ್ಚ ನ್ಯಾಯಾಲಯವು ಎರಡೂ ಪ್ರಕರಣಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆಯೇ ಎನ್ನುವುದನ್ನು ವರದಿ ಮಾಡುವಂತೆ ರಾಜಸ್ಥಾನ ಮತ್ತು ಪ.ಬಂಗಾಳ ಪೋಲಿಸರಿಗೆ ನಿರ್ದೇಶನ ನೀಡಿತ್ತು.







