ಮುಂಬೈನ ಪೊಲೀಸ್ ಅಧಿಕಾರಿಗಳು ಪ್ರತಿ ವರ್ಷ ಮಾಹಿಮ್ ದರ್ಗಾಗೆ ಚಾದರ್ ಹೊತ್ತು ಮೆರವಣಿಗೆ ಮಾಡುವುದೇಕೆ?

ಮುಂಬೈ: ಪ್ರತಿವರ್ಷ ಮಾಹಿಮ್ ದರ್ಗಾದ ಉರೂಸ್ ಪ್ರಾರಂಭವಾದಂತೆ, ಪೊಲೀಸ್ ಬ್ಯಾಂಡ್ ಮುನ್ನಡೆಸುವ ಮೆರವಣಿಗೆ, ಹಸಿರು ಚಾದರ್ ಹೊತ್ತ ಹಿರಿಯ ಅಧಿಕಾರಿಗಳು ಮತ್ತು ನೂರಾರು ಸಮವಸ್ತ್ರಧಾರಿಗಳು ಸಾಲಾಗಿ ನಡೆಯುತ್ತಿರುವ ದೃಶ್ಯ ಮುಂಬೈ ನಗರದ ಬೀದಿಗಳಲ್ಲಿ ಕಂಡು ಬರುತ್ತದೆ. ಧಾರ್ಮಿಕ ಆಚರಣೆಯಂತೆ ಕಾಣುವ ಈ ಪದ್ಧತಿಗೆ ನಗರದ ವಸಾಹತು ಇತಿಹಾಸ, ಸೂಫಿ ಸಂತರೊಂದಿಗಿನ ನಗರದ ಐತಿಹಾಸಿಕ ಬಾಂಧವ್ಯ ಈ ಸಂಪ್ರದಾಯಕ್ಕೆ ಜೀವ ತುಂಬಿವೆ.
ಆರು ಶತಮಾನಗಳ ಮಾಹಿಮ್ ದರ್ಗಾ ಮಖ್ದೂಮ್ ಅಲಿ ಮಹಿಮಿಯವರ ದರ್ಗಾ ಮುಂಬೈನ ಅತ್ಯಂತ ಹಳೆಯ ಸೂಫಿ ದಾರ್ಶನಿಕರ ಸ್ಥಳಗಳಲ್ಲಿ ಒಂದಾಗಿದೆ.
ಹಝರತ್ ಮಖ್ದೂಮ್ ಅಲಿ ಮಹಿಮಿಯ ಪೂರ್ವಜರು ಬಸ್ರಾದ ಗವರ್ನರ್ ಹಜ್ಜಾಜ್ ಇಬ್ನ್ ಯೂಸುಫ್ ಅವರ ಕಿರುಕುಳದಿಂದ ಪಲಾಯನ ಮಾಡಿದ ನಂತರ ಕ್ರಿ.ಶ. 860ರ ಸುಮಾರಿಗೆ ಭಾರತಕ್ಕೆ ಬಂದರು ಎನ್ನುವ ಜನನಂಬಿಕೆ ಇದೆ.
ಭಾರತದಲ್ಲೇ ಜನಿಸಿದ ಮಖ್ದೂಮ್ ಅಲಿ, ಇಸ್ಲಾಮಿಕ್ ಕಾನೂನು ಮತ್ತು ತತ್ತ್ವಶಾಸ್ತ್ರದಲ್ಲಿ ಪರಿಣತಿ ಪಡೆದ ನಂತರ ಮಹಿಮ್ ಸಮುದಾಯಕ್ಕೆ ಫಕೀಹ್, ಧಾರ್ಮಿಕ ಕಾನೂನು ಗುರುವಾಗಿ ನೇಮಕಗೊಂಡರು.
1431ರಲ್ಲಿ ಅವರ ನಿಧನದ ನಂತರ ನಿರ್ಮಾಣವಾದ ದರ್ಗಾ, ಶತಮಾನಗಳಿಂದ ನಾವಿಕರು, ವ್ಯಾಪಾರಿಗಳು ಮತ್ತು ವಿವಿಧ ಸಮುದಾಯಗಳಿಗೆ ಆಧ್ಯಾತ್ಮಿಕ ಆಶ್ರಯ ಒದಗಿಸಿದೆ.
ಪೊಲೀಸರ ನಂಟು ಹೇಗೆ ಬಂತು? :
ಔಪಚಾರಿಕ ಮುಂಬೈ ಪೊಲೀಸ್ ವ್ಯವಸ್ಥೆ ರೂಪಗೊಳ್ಳುವ ಮುನ್ನ, ಭಂಡಾರಿ ಮಿಲಿಟಿಯಾ ಎಂಬ ಸ್ಥಳೀಯ ಕಾವಲು ದಳವೇ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತಿತ್ತು. ಅವರ ಚೌಕಿಗಳು ಸಂತರು ವಾಸಿಸುತ್ತಿದ್ದ ಅಥವಾ ಬೋಧನೆ ನೀಡುತ್ತಿದ್ದ ಪ್ರದೇಶಗಳ ಹತ್ತಿರವಿದ್ದ ಕಾರಣ, ಸೂಫಿ ಪರಂಪರೆ ಮತ್ತು ಸ್ಥಳೀಯ ಕಾವಲುಗಾರರ ನಡುವೆ ಸೌಹಾರ್ದ ನಂಟು ಬೆಳೆದಿತ್ತು.
ಕೆಲ ಸಂದರ್ಭಗಳಲ್ಲಿ ಮಿಲಿಟಿಯಾ ಸದಸ್ಯರು “ಕಾಣದ ಶಕ್ತಿ ಸಹಾಯ ಮಾಡುತ್ತಿದೆ” ಎಂದು ನಂಬಿದ್ದರು. ಈ ದಂತಕಥೆಗಳು ಮುಂದಿನ ಪೊಲೀಸ್‌ಪಡೆ–ದರ್ಗಾ ನಂಟಿನ ಭಾವನಾತ್ಮಕ ನೆಲೆಯಾಗಿ ಉಳಿದಿವೆ ಎಂಬ ಮಾತು ಜನಜನಿತವಾಗಿದೆ.
ಈ ನಂಟು ಮೆರವಣಿಗೆಯ ರೂಪದಲ್ಲಿ ವಾಸ್ತವವಾಗಿರುವುದನ್ನು 1909–1916ರ ಪೊಲೀಸ್ ಆಯುಕ್ತ ಎಸ್.ಎಂ.ಎಡ್ವರ್ಡ್ಸ್ ತಮ್ಮ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.
1910ರ ಬಾಂಬೆ ಗೆಜೆಟಿಯರ್‌ನಲ್ಲಿ “ಪೊಲೀಸ್ ಮೆರವಣಿಗೆ ಉರೂಸ್‌ನ ಪ್ರಮುಖ ಅಂಗ” ಎಂದು ಹಳೆಯ ದಾಖಲೆಗಳಿವೆ.
ಇಂದಿಗೂ, ಮುಂಬೈ ಪೊಲೀಸರು ಸಿಬ್ಬಂದಿಯಿಂದ 25 ರೂ. ಸಂಗ್ರಹಿಸಿ ದರ್ಗಾಗೆ ಅರ್ಪಿಸುವ ಚಾದರ್ ಸೇರಿದಂತೆ ಕಾಣಿಕೆಗಳನ್ನು ವ್ಯವಸ್ಥೆ ಮಾಡುವ ವಿಶೇಷ ಟ್ರಸ್ಟ್ ನಡೆಸುತ್ತಿದ್ದಾರೆ.
ರೆಹಮಾನ್ ಶಾ ಬಾಬಾ ದರ್ಗಾದಲ್ಲೂ ಸಂಪ್ರದಾಯ ಜೀವಂತ :
ಮಾಹಿಮ್ ಮಾತ್ರವಲ್ಲ ಡೋಂಗ್ರಿಯ ಹಾಜಿ ರೆಹಮಾನ್ ಶಾ ಬಾಬಾ ದರ್ಗಾದಲ್ಲಿಯೂ ಪೊಲೀಸರಿಂದ ನಡೆಯುವ ವಾರ್ಷಿಕ ಕಾಣಿಕೆ ಚಾದರ್ ಅರ್ಪಣೆ ಆಚರಣೆ ಚಾಲ್ತಿಯಲ್ಲಿದೆ.
19ನೇ ಶತಾಬ್ಧಿಯಲ್ಲಿ ಸೇಲಂನಲ್ಲಿ ಜನಿಸಿ ಬಳಿಕ ಬಾಂಬೆ ಸೇರಿದ್ದ ರೆಹಮಾನ್ ಶಾ ಬಾಬಾ ಅವರ ಬಗ್ಗೆ ಹಲವು ದಂತಕಥೆಗಳು ಪ್ರಸಿದ್ಧ—ವಿಶೇಷವಾಗಿ “ಎಷ್ಟೇ ದೂರುಗಳು ಬಂದರೂ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ” ಎನ್ನುವ ಕಥನ.
1915ರಲ್ಲಿ ಅವರ ನಿಧನದ ನಂತರ, ಸ್ಥಳೀಯ ಸಮುದಾಯದ ಗೌರವ ಹಾಗೂ ಅವರ ಪ್ರಭಾವ ಪರಿಗಣಿಸಿ ಬಾಂಬೆ ಪೊಲೀಸರು ದರ್ಗಾಗೆ ಗೌರವ ಸಲ್ಲಿಸಲು ಆರಂಭಿಸಿದರು.
ಈ ವರ್ಷ ಅಕ್ಟೋಬರಲ್ಲಿಯೂ ಮುಂಬೈ ಪೊಲೀಸ್ ಆಯುಕ್ತರು ಸ್ವತಃ ಸಂದಲ್ ಮೆರವಣಿಗೆಗೆ ನೇತೃತ್ವವಹಿಸಿ ದರ್ಗಾಗೆ ಚಾದರ್ ಅರ್ಪಿಸಿದರು.
ಧರ್ಮಕ್ಕಿಂತಲೂ ನಗರ ನಿರ್ವಹಣೆಯ ಪರಂಪರೆ :
ಮಹಿಮ್, ಹಾಜಿ ಅಲಿ, ಡೋಂಗ್ರಿ ಇವು 19ನೇ–20ನೇ ಶತಮಾನಗಳಲ್ಲಿ ಮುಂಬೈನ ಅತಿದೊಡ್ಡ ಸಾರ್ವಜನಿಕ ಕೇಂದ್ರಗಳು.
ಉರೂಸ್ ಸಂದರ್ಭದಲ್ಲಿ ಸಾವಿರಾರು ಜನ ಸೇರುವುದರಿಂದ ಸಂಚಾರ, ಕಳ್ಳತನ, ಜಗಳ, ಕಾಲ್ತುಳಿತದಂತಹ ಪೊಲೀಸ್ ಕಾವಲು ಅಗತ್ಯವಾಗುತ್ತಿತ್ತು. ಉರೂಸ್ ಸಮಿತಿಯೊಂದಿಗೆ ಈ ನಿರಂತರ ಸಮನ್ವಯವು ಕೊನೆಗೆ ವಿಧ್ಯುಕ್ತ ಸಮಾರಂಭವಾಗಿ ರೂಪುಗೊಂಡಿತು.
ಹಳೆಯ ಪೊಲೀಸ್ ಚೌಕಿಗಳು ದರ್ಗಾಗಳ ಪಕ್ಕದಲ್ಲಿಯೇ ಇದ್ದುದರಿಂದ ಸಂಬಂಧ ಮತ್ತಷ್ಟು ಗಾಢವಾಯಿತು.
ಬ್ರಿಟಿಷ್ ಆಡಳಿತವು ಡಾಕ್‌ಯಾರ್ಡ್ ಉದ್ವಿಗ್ನತೆ ಮತ್ತು ಕೋಮು ಗಲಭೆಗಳನ್ನು ತಗ್ಗಿಸಲು ಸಮುದಾಯ ಸಂಸ್ಥೆಗಳೊಂದಿಗೆ ಸ್ನೇಹಪೂರ್ಣ ನಂಟನ್ನು ಬೆಳೆಸಲು ಪೊಲೀಸರಿಗೆ ಪ್ರೇರಣೆ ನೀಡಿತ್ತು.







