ಟ್ರಂಪ್ ಆರೋಪಗಳಿಗೆ ಮೋದಿ ಯಾಕೆ ಇನ್ನೂ ಮೌನ?: ಖರ್ಗೆ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ,ಜು.31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಕುರಿತು ಮಾಡಿರುವ ಆಧಾರರಹಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸದೇ, ಮೌನವಾಗಿಯೇ ಇರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಕದನವಿರಾಮ ಕುರಿತಾದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ಬಗ್ಗೆ ಲೋಕಸಭೆಯಲ್ಲಿ ಮೋದಿ ಅವರು ಮೌನವ್ರತ ತಾಳಿದ್ದಾರೆ. ಭಾರತದ ಬಗ್ಗೆ ಟ್ರಂಪ್ ಮಾಡಿರುವ ಆಧಾರರಹಿತ ಆರೋಪಗಳ ಬಗ್ಗೆ ಮೋದಿಜೀಯವರು ಮೌನವಾಗಿಯೇ ಇರುತ್ತಾರೆಯೇ?. ನರೇಂದ್ರ ಮೋದಿಜೀ, ಎಲ್ಲಕ್ಕಿಂತಲೂ ರಾಷ್ಟ್ರ ಮೊದಲು ಹಾಗೂ ನಾವು ಯಾವತ್ತೂ ದೇಶದ ಜೊತೆಗಿರುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ಭಾರತದ ಮೇಲೆ ಟ್ರಂಪ್ ಅವರು ಶೇ.25ರಷ್ಟು ಸುಂಕ ಹಾಗೂ ದಂಡವನ್ನು ವಿಧಿಸಿರುವ ಬಗ್ಗೆ ಅವರು ಗಮನಸೆಳೆದಿದ್ದಾರೆ.
ಭಾರತದ ಮೇಲೆ ಟ್ರಂಪ್ ಅವರು ಶೇ.25ರಷ್ಟು ತೆರಿಗೆ ಹಾಗೂ ಹೆಚ್ಚುವರಿ ದಂಡವನ್ನು ವಿಧಿಸಿರುವುದರಿಂದ ಮಧ್ಯಮ, ಕಿರು,ಸೂಕ್ಷ ಉದ್ಯಮಗಳಿಗೆ ತೀವ್ರ ಹಾನಿಯಾಗಿದೆ. ಹಲವಾರು ಕೈಗಾರಿಕೆಗಳಿಗೆ ಅಪಾರ ನಷ್ಟವಾಗಿದೆ. ಹಲವಾರು ತಿಂಗಳುಗಳಿಂದ ನಿಮ್ಮ ಸಚಿವರು, ಅಮೆರಿಕ ಜೊತೆ ವ್ಯಾಪಾರ ಒಪ್ಪಂದದ ಕುರಿತಂತೆ ಮಾತುಕತೆಯಲ್ಲಿ ತೊಡಗಿದ್ದೀರಿ. ಅವರಲ್ಲಿ ಕೆಲವರು ಹಲವಾರು ದಿನಗಳಿಂದ ವಾಶಿಂಗ್ಟನ್ ನಲ್ಲಿಯೇ ಬೀಡುಬಿಟ್ಟಿದ್ದರು ಎಂದು ಖರ್ಗೆ ಹೇಳಿದ್ದಾರೆ.
‘ನಮಸ್ತೆ ಟ್ರಂಪ್’ ಹಾಗೂ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’. ಹೀಗೆ ನಿಮ್ಮೊಂದಿಗಿನ ಗೆಳೆತನಕ್ಕಾಗಿ ನಿಮ್ಮ ಸ್ನೇಹಿತ ನಮ್ಮ ದೇಶಕ್ಕೆ ನೀಡಿದ ಉಡುಗೊರೆ ಇದೇನು? ಎಂದು ಅವರು ಪ್ರಶ್ನಿಸಿದ್ದಾರೆ. ಭಾರತದ ಮೇಲೆ ಅಧಿಕ ಸುಂಕ ಹೇರಿಕೆಗೆ ಟ್ರಂಪ್ ಅವರು, ಭಾರತದಿಂದ ತೈಲ ಹಾಗೂ ಶಸ್ತ್ರಾಸ್ತ್ರ ಖರೀದಿ ಮತ್ತು ಭಾರತವು ಬ್ರಿಕ್ಸ್ ಸದಸ್ಯ ರಾಷ್ಟ್ರವಾಗಿರುವುದರ ಕಾರಣ ನೀಡಿದ್ದಾರೆ. ಇದು ಭಾರತದ ಆಯಕಟ್ಟಿನ ಸ್ವಾಯತ್ತೆಗೆ ನೀಡಿದ ಹೊಡೆತವಾಗಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೈಲ ನಿಕ್ಷೇಪಗಳಿಗೆ ಸಂಬಂಧಿಸಿ ಪಾಕಿಸ್ತಾನದ ಜೊತೆ ವ್ಯಾಪಾರ ಒಪ್ಪಂದವನ್ನು ಏರ್ಪಡಿಸುವ ಮಾತುಗಳನ್ನು ಅಮೆರಿಕ ಆಡುತ್ತಿದೆ ಮತ್ತು ಭಾರತವನ್ನು ಬೆದರಿಸುತ್ತಿದೆ. ಆದರೂ ಪ್ರಧಾನಿ ಯಾಕೆ ಮೌನವಾಗಿದ್ದಾರೆಂದು ಖರ್ಗೆ ಪ್ರಶ್ನಿಸಿದ್ದಾರೆ.
ನಾವು ಇದೀಗ ನೂತನ ಅಮೆರಿಕ – ಚೀನಾ - ಪಾಕಿಸ್ತಾನ ಕೂಟದ ಬಗ್ಗೆ ಆತಂಕ ಗೊಂಡಿದ್ದೇವೆ. ಸಾರ್ವಜನಿಕ ಸಂಬಂಧಗಳ ಬಗ್ಗೆ ಚಿಂತಿಸುವ ಬದಲು ಮೋದಿಸರಕಾರವು ದೇಶದ ಬಗ್ಗೆ ಯೋಚಿಸಬೇಕಾಗಿದೆ ಎಂದು ಖರ್ಗೆ ಹೇಳಿದರು.
ಭಾರತಕ್ಕೆ ಶೇ. 25ರಷ್ಟು ಸುಂಕ ಹಾಗೂ ಹೆಚ್ಚುವರಿ ದಂಡವನ್ನು ಘೋಷಿಸಿದ ಸಂದರ್ಭ ಟ್ರಂಪ್ ಅವರು, ಭಾರತ ಹಾಗೂ ರಶ್ಯಗಳ ನಡುವಿನ ನಿಕಟ ಬಾಂಧವ್ಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಹಾಗೂ ಈ ಎರಡೂ ದೇಶಗಳು ತಮ್ಮ ‘ಸತ್ತ ಆರ್ಥಿಕತೆಯನ್ನು ಒಟ್ಟಾಗಿ ಕೊಂಡೊಯ್ಯಬಹುದಾಗಿದೆ’’ ಎಂದು ವ್ಯಂಗ್ಯವಾಡಿದ್ದರು.







