ಬಾಂಗ್ಲಾದೇಶಿಗರನ್ನು ಗಡೀಪಾರು ಮಾಡಲು ಕೇಂದ್ರ ಸರಕಾರದ ಯೋಜನೆ: ಶೇಖ್ ಹಸೀನಾರನ್ನು ಏಕೆ ಗಡಿಪಾರು ಮಾಡಿಲ್ಲ ಎಂದು ಪ್ರಶ್ನಿಸಿದ ಉವೈಸಿ!

PC - ANI
ಹೊಸದಿಲ್ಲಿ: ಕೇಂದ್ರ ಸರಕಾರವು ಬಾಂಗ್ಲಾದೇಶೀಯರನ್ನು ಭಾರತದಿಂದ ಗಡಿಪಾರು ಮಾಡುವ ಯೋಜನೆ ರೂಪಿಸುತ್ತಿದೆ ಎಂಬ ವರದಿಗಳ ಬೆನ್ನಿಗೇ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನೇಕೆ ದೇಶದಿಂದ ಗಡೀಪಾರು ಮಾಡುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಆಗಸ್ಟ್ 2024ರಲ್ಲಿ ಶೇಖ್ ಹಸೀನಾರ ಸರಕಾರ ಪದಚ್ಯುತಗೊಂಡಾಗಿನಿಂದ, ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
The Indian Express ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಸದುದ್ದೀನ್ ಉವೈಸಿ, “ಗಡೀಪಾರಾಗಿರುವ ನಾಯಕಿ ಶೇಖ್ ಹಸೀನಾರನ್ನು ನಾವೇಕೆ ದೇಶದಲ್ಲಿಟ್ಟುಕೊಂಡಿದ್ದೇವೆ? ಆಕೆಯನ್ನು ಮರಳಿ ಕಳಿಸಿ. ಆಕೆ ಕೂಡಾ ಬಾಂಗ್ಲಾದೇಶಿ ಅಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
“ಮಾಲ್ಡಾ ಹಾಗೂ ಮುರ್ಷಿದಾಬಾದ್ ನ ಬಡ ಬಂಗಾಳಿ ಭಾಷಿಕ ಮುಸ್ಲಿಮರನ್ನು ಪುಣೆಯಿಂದ ಕೋಲ್ಕತ್ತಾಗೆ ವಾಪಸು ಕಳಿಸಲಾಗಿದೆ ಹಾಗೂ ಯಾರ ನೆರವೂ ಇಲ್ಲದ ಸ್ಥಳದಲ್ಲಿ ಅವರನ್ನು ಹಾಕಲಾಗಿದೆ. ಆದರೆ, ಹೇಳಿಕೆ ಹಾಗೂ ಭಾಷಣಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಓರ್ವ ಬಾಂಗ್ಲಾದೇಶಿಗೆ ನಮ್ಮ ದೇಶದಲ್ಲಿ ಆಶ್ರ ಯ ನೀಡಲಾಗಿದೆ” ಎಂದು ಅವರು ಶೇಖ್ ಹಸೀನಾರನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ದೇಶಾದ್ಯಂತ ಬಂಗಾಳಿ ವಲಸಿಗರನ್ನು ಗುರಿಯಾಗಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಉವೈಸಿ, “ಆ ಜನರನ್ನು ಸೆರೆವಾಸದ ಕೇಂದ್ರಗಳಲ್ಲಿರಿಸುವ ಯಾವ ಅಧಿಕಾರ ಪೊಲೀಸರಿಗಿದೆ? ಎಲ್ಲರೂ ಸ್ವಯಂ ರಕ್ಷಕರಾಗಿಬಿಟ್ಟಿದ್ದಾರೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.







