ಏರ್ ಇಂಡಿಯಾವನ್ನೇ ಏಕೆ ಗುರಿಯಾಗಿಸಿಕೊಂಡಿದ್ದೀರಿ?: ಸುಪ್ರೀಂ ಕೋರ್ಟ್ ಪ್ರಶ್ನೆ

ಏರ್ ಇಂಡಿಯಾ ವಿಮಾನ (PC : X), ಸುಪ್ರೀಂ ಕೋರ್ಟ್(PC : PTI)
ಹೊಸದಿಲ್ಲಿ: ಏರ್ ಇಂಡಿಯಾದ ಸುರಕ್ಷತಾ ಪದ್ಧತಿಗಳ ಕುರಿತು ಪರಿಶೀಲನೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ನಿರಾಕರಿಸಿದ ಸುಪ್ರೀಂ ಕೋರ್ಟ್, “ದುರದೃಷ್ಟಕರ ಅಪಘಾತ ಎದುರಿಸಿರುವ ಏರ್ ಇಂಡಿಯಾವನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದೀರಿ?” ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಅರ್ಜಿಯನ್ನು ಹಿಂಪಡೆಯುವಂತೆ ಸ್ವಯಂವಾದಿ ಅರ್ಜಿದಾರ ನರೇಂದ್ರ ಕುಮಾರ್ ಗೋಸ್ವಾಮಿಗೆ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಜಾಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಏನಾದರೂ ಕುಂದುಕೊರತೆಗಳಿದ್ದರೆ, ಸೂಕ್ತ ವೇದಿಕೆಯ ಮುಂದೆ ತೆರಳುವಂತೆ ಅವರಿಗೆ ಸೂಚಿಸಿತು.
“ನೀವು ಇತರ ವಿಮಾನ ಯಾನ ಸಂಸ್ಥೆಗಳೊಂದಿಗೆ ಆಟವಾಡುತ್ತಿದ್ದೀರಿ ಎಂಬ ಭಾವನೆ ಮೂಡಿಸಬೇಡಿ. ಇತ್ತೀಚೆಗೆ ದುರದೃಷ್ಟಕರ ಅಪಘಾತ ಎದುರಿಸಿರುವ ಏರ್ ಇಂಡಿಯಾವನ್ನೇ ನೀವೇಕೆ ಗುರಿಯಾಗಿಸಿಕೊಂಡಿದ್ದೀರಿ? ನೀವು ಒಂದಿಷ್ಟು ಶಾಸನಾತ್ಮಕ ಯಾಂತ್ರಿಕತೆ ಅಸ್ತಿತ್ವದಲ್ಲಿರಬೇಕು ಎಂದು ಬಯಸುತ್ತಿದ್ದರೆ, ನೀವು ಇತರ ವಿಮಾನ ಯಾನ ಸಂಸ್ಥೆಗಳನ್ನೇಕೆ ಪ್ರತಿವಾದಿಗಳನ್ನಾಗಿಸಿಲ್ಲ? ಏರ್ ಇಂಡಿಯಾವನ್ನು ಮಾತ್ರವೇಕೆ ಪ್ರತಿವಾದಿಯನ್ನಾಗಿಸಿದ್ದೀರಿ?” ಎಂದು ವಕೀಲರೂ ಆದ ಅರ್ಜಿದಾರ ಗೋಸ್ವಾಮಿಯನ್ನು ನ್ಯಾಯಪೀಠ ಪ್ರಶ್ನಿನಸಿತು.
ಈ ಪ್ರಶ್ನೆಗೆ ಪ್ರತಿಯಾಗಿ, ನಾನು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕೆಲವು ದುರದೃಷ್ಟಕರ ಘಟನೆಗಳ ಸಂತ್ರಸ್ತನಾಗಿದ್ದೇನೆ ಎಂದು ಅವರು ಉತ್ತರಿಸಿದರು.
ಇದಕ್ಕೂ ಮುನ್ನ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಸುರಕ್ಷತಾ ಪದ್ಧತಿಗಳು, ನಿರ್ವಹಣಾ ವಿಧಾನಗಳು ಹಾಗೂ ಕಾರ್ಯಾಚರಣೆ ಶಿಷ್ಟಾಚಾರಗಳ ಕುರಿತು ಪರಿಶೀಲನೆ ನಡೆಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಮೂರು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಬೇಕು ಎಂದು ಅರ್ಜಿದಾರ ನರೇಂದ್ರ ಕುಮಾರ್ ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.







