ಯಾಕೆ ಮೌನವಾಗಿದ್ದೀರಿ?: ಬಿಜೆಪಿ ವಿರುದ್ಧದ ತನ್ನ ವಾಗ್ದಾಳಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿದ ಕಾಂಗ್ರೆಸ್
ಮೋದಿ 21 ದಶಲಕ್ಷ ಡಾಲರ್ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ ಟ್ರಂಪ್

ಪ್ರಧಾನಿ ನರೇಂದ್ರ ಮೋದಿ | Photo : Reuters
ಹೊಸದಿಲ್ಲಿ: “ಭಾರತದಲ್ಲಿನ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನನ್ನ ಗೆಳೆಯ ಪ್ರಧಾನಿ ನರೇಂದ್ರ ಮೋದಿಗೆ 21 ದಶಲಕ್ಷ ಡಾಲರ್ ಹೋಗಿತ್ತು” ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆಯ ಬೆನ್ನಿಗೇ, ಯುಎಸ್ಏಡ್ ವಿವಾದದ ಕುರಿತು ಆಡಳಿತಾರೂಢ ಬಿಜೆಪಿ ವಿರುದ್ಧದ ತನ್ನ ವಾಗ್ದಾಳಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿರುವ ಕಾಂಗ್ರೆಸ್, ಈ ಕುರಿತು ಕೇಸರಿ ಪಾಳಯವೇಕೆ ಮೌನಕ್ಕೆ ಜಾರಿದೆ ಹಾಗೂ ಈ ಹೇಳಿಕೆಯನ್ನು ಯಾಕೆ ನಿರಾಕರಿಸುತ್ತಿಲ್ಲ ಎಂದು ಪ್ರಶ್ನಿಸಿದೆ.
ಇದರೊಂದಿಗೆ, ಇತ್ತೀಚಿನ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಆಪ್ ವಿರುದ್ಧವೇ ತೀವ್ರವಾಗಿ ಸೆಣಸಿದ್ದ ಕಾಂಗ್ರೆಸ್, ಈ ವಿವಾದದ ಮಧ್ಯಭಾಗಕ್ಕೆ ಅರವಿಂದ್ ಕೇಜ್ರಿವಾಲ್ ರನ್ನೂ ಎಳೆದು ತಂದಿದೆ. 2012ರಲ್ಲಿ ಹರಿದು ಬಂದಿದ್ದ 3.65 ಲಕ್ಷ ಡಾಲರ್ ನೆರವು ಆಪ್ ಪಕ್ಷದ ರಚನೆಯಲ್ಲೇನಾದರೂ ಪಾತ್ರ ವಹಿಸಿತ್ತೆ? ಎಂದು ಅವರನ್ನು ಪ್ರಶ್ನಿಸಿದೆ.
‘ಪ್ರಜಾತಾಂತ್ರಿಕ ಪಾಲ್ಗೊಳ್ಳುವಿಕೆ ಹಾಗೂ ನಾಗರಿಕ ಸಮಾಜ’ ಕಾರ್ಯಕ್ರಮಗಳಿಗೆ ಹರಿದು ಬಂದಿದ್ದ 3.65 ಲಕ್ಷ ಡಾಲರ್ ನೆರವಿನ ಒಂದು ಭಾಗವೇನಾದರೂ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ವಿರುದ್ಧ ಪಿತೂರಿ ನಡೆಸಿ, ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವ ಮೋದಿ ಪ್ರಚಾರಕ್ಕೆ ಬಳಕೆಯಾಗಿತ್ತೆ ಎಂದೂ ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಟ್ರಂಪ್ ರ ಹೇಳಿಕೆ ಸಾರ್ವಜನಿಕಗೊಳ್ಳುತ್ತಿದ್ದಂತೆಯೆ, ಭಾರತಕ್ಕೆ 21 ದಶಲಕ್ಷ ಡಾಲರ್ ನೆರವು ಕಳಿಸಿರುವ ಯಾವುದೇ ಯೋಜನಾ ದಾಖಲೆ ಇಲ್ಲ ಎಂದು Washington Post ವರದಿ ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಪವನ್ ಖೇರಾ, “ಮೋದಿ ಸರಕಾರ, ಅದರ ಆರ್ಥಿಕ ಸಲಹೆಗಾರರು, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ, ಅದರ ಪರಿಸರ ಹಾಗೂ ಬಿಜೆಪಿಯ ಚಿಯರ್ ಲೀಡರ್ ಗಳಾದ ಮಾಧ್ಯಮ ಸಮೂಹಗಳು ಇದೀಗ ತಮ್ಮ ಆಳವಾದ ವಿದೇಶಿ ಪಿತೂರಿ ಹಾಗೂ ವಿದೇಶಿ ಹಸ್ತಕ್ಷೇಪದ ಆರೋಪವನ್ನು ಸಾಬೀತು ಮಾಡಲು ಹತಾಶ ಪ್ರಯತ್ನದಲ್ಲಿವೆ” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರಧಾನ ಮಂತ್ರಿಗಳು ತಮ್ಮ ಗೆಳೆಯನಿಗೆ ಕರೆ ಮಾಡಿ ಹೀಗೇಕೆ ಮಾಡಿದಿರಿ ಎಂದು ಅವರನ್ನು ಪ್ರಶ್ನಿಸಿರಬೇಕು. ಒಂದು ವೇಳೆ ಅವರು ಈ ಕುರಿತು ಸಂಘರ್ಷಕ್ಕಿಳಿಯದಿದ್ದರೆ, ಟ್ರಂಪ್ ಹೇಳಿರುವುದು ಸರಿ ಎಂಬುದು ಸ್ಪಷ್ಟವಾಗುತ್ತದೆ. ಯಾಕೆ ಇಷ್ಟೊಂದು ಮೌನ ಆವರಿಸಿದೆ? ಯಾರು ಸುಳ್ಳು ಹೇಳುತ್ತಿದ್ದಾರೆ? ರಾಜಕೀಯ ಪಕ್ಷಗಳು, ವ್ಯಕ್ತಿಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಮುಸುಕು ಹೊದ್ದುಕೊಂಡಿರುವ ರಾಜಕೀಯ ಸಂಘಟನೆಗಳು ಎಷ್ಟು ಹಣ ಪಡೆದಿವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.







