ಮಣಿಪುರ ಹಿಂಸಾಚಾರ, ಕುಂಭಮೇಳ ಕಾಲ್ತುಳಿತ ಘಟನೆ ಬಗ್ಗೆ ಸತ್ಯಶೋಧನೆಗೆ ಯಾಕೆ ಸಮಿತಿ ಕಳುಹಿಸಿಲ್ಲ : ಬಿಜೆಪಿಗೆ ಎಂ.ಕೆ.ಸ್ಟಾಲಿನ್ ಪ್ರಶ್ನೆ

Photo | ndtv
ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ 41 ಮಂದಿಯ ಪ್ರಾಣ ಹಾನಿಗೆ ಕಾರಣವಾದ ನಟ, ರಾಜಕಾರಣಿ ವಿಜಯ್ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ರಾಜಕೀಯ ವಿವಾದದ ಸ್ವರೂಪಕ್ಕೆ ತಿರುಗಿದೆ. ಕಾಲ್ತುಳಿತ ಘಟನೆಯ ಕುರಿತು ಸತ್ಯಶೋಧನೆ ನಡೆಸಲು ಬಿಜೆಪಿಯು ತನ್ನ ಪಕ್ಷದ ಸಂಸದರ ನಿಯೋಗವನ್ನು ತಮಿಳುನಾಡಿನ ಕರೂರಿಗೆ ರವಾನಿಸಿರುವುದನ್ನು ಶುಕ್ರವಾರ ತೀಕ್ಷ್ಣವಾಗಿ ಟೀಕಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, "ಮಣಿಪುರ, ಕುಂಭಮೇಳ ಕಾಲ್ತುಳಿತದ ಘಟನೆಗಳ ಸತ್ಯಶೋಧನೆಗೇಕೆ ಯಾವುದೇ ಸಮಿತಿಯನ್ನು ರವಾನಿಸಲಿಲ್ಲ" ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತಾರೂಢ ರಾಜ್ಯಗಳಾದ ಮಣಿಪುರದಲ್ಲಿ ಮೇ 2023ರಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಹಾಗೂ ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಗಳ ಕುರಿತು ಸತ್ಯಶೋಧನೆ ನಡೆಸಲು ಬಿಜೆಪಿಯೇಕೆ ಸಮಿತಿಯನ್ನು ರವಾನಿಸಲಿಲ್ಲ ಎಂದು ಪ್ರಶ್ನಿಸಿರುವ ಎಂ.ಕೆ.ಸ್ಟಾಲಿನ್, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ವೇಳೆ ಲಾಭ ಪಡೆಯಲು ಬಿಜೆಪಿ ಕರೂರ್ ಕಾಲ್ತುಳಿತ ಘಟನೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
"ಯಾವುದೇ ತನಿಖಾ ಸಮಿತಿಯನ್ನು ಮಣಿಪುರ ಅಥವಾ ಕುಂಭಮೇಳ ಕಾಲ್ತುಳಿತ ಘಟನಾ ಸ್ಥಳಕ್ಕೆ ರವಾನಿಸಲಿಲ್ಲ. ಆದರೆ, ಕರೂರಿಗೆ ತಕ್ಷಣವೇ ನಿಯೋಗವನ್ನು ಕಳುಹಿಸಲಾಗಿದೆ. ನಿಯೋಗವನ್ನು ರವಾನಿಸಿರುವುದು ತಮಿಳುನಾಡಿನ ಮೇಲಿನ ಕಾಳಜಿಯಿಂದಲ್ಲ; ಬದಲಿಗೆ ಚುನಾವಣೆಯ ಕಾರಣಕ್ಕೆ. ಬಿಜೆಪಿಯು ಕರೂರ್ ಕಾಲ್ತುಳಿತ ಘಟನೆಯಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ" ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ, ಬಿಜೆಪಿ ಸಂಸದೆ ಹೇಮಾಮಾಲಿನಿ ನೇತೃತ್ವದ ನಿಯೋಗ ಮಂಗಳವಾರ ಕರೂರಿಗೆ ಭೇಟಿ ನೀಡಿ, ಮೃತರು ಹಾಗೂ ಗಾಯಾಳುಗಳ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿತ್ತು. ಇದು ತಮಿಳುನಾಡಿನಲ್ಲಿ ರಾಜಕೀಯ ವಿವಾದಕ್ಕೆ ಗುರಿಯಾಗಿತ್ತು.







