ಸೇನಾ ಅಧಿಕಾರಿಯಾಗುವ ಸೈನಿಕನ ಕನಸು ನನಸಾಗಿಸಿದ ವಿಧವಾ ಪತ್ನಿ

PC | timesofindia.indiatimes.com
ಚೆನ್ನೈ: ಸೋನಿ ಬಿಸ್ಟ್ ಎಂಬ ಮಹಿಳೆ ವಿವಾಹವಾಗಿ ಕೇವಲ ಒಂದು ತಿಂಗಳಲ್ಲಿ ಕುಮಾನ್ 18ನೇ ರೆಜಿಮೆಂಟ್ನಲ್ಲಿ ಸೈನಿಕನಾಗಿದ್ದ ಪತಿ ನೀರಜ್ ಸಿಂಗ್ ಭಂಡಾರಿಯವರನ್ನು ಅಪಘಾತವೊಂದರಲ್ಲಿ ಕಳೆದುಕೊಳ್ಳಬೇಕಾಯಿತು. ದುಃಖದಲ್ಲಿ ಧೈರ್ಯ ಕಳೆದುಕೊಳ್ಳದೇ ಅದನ್ನು ಸವಾಲಾಗಿ ಸ್ವೀಕರಿಸಿ, ಭಾರತೀಯ ಸೇನಾ ಅಧಿಕಾರಿಯಾಗಬೇಕು ಎಂಬ ಕನಸನ್ನು ನನಸಾಗಿಸುವ ಪಣ ತೊಟ್ಟರು.
ಶನಿವಾರ ಇಲ್ಲಿನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಪಾಸಿಂಗ್ ಔಟ್ ಪೆರೇಡ್ನಲ್ಲಿ ಹೆಜ್ಜೆ ಹಾಕುವ ಮೂಲಕ ಕನಸು ನನಸಾಗಿಸಿದರು.
"ಕುಮಾನ್ ರೆಜಿಮೆಂಟ್ನ ಅಧಿಕಾರಿಯಿಂದ ‘ವೀರನಾರಿ’ ಪ್ರವೇಶದ ಬಗ್ಗೆ ನನಗೆ ತಿಳಿದಾಗ, ಆ ಹಾದಿಯಲ್ಲಿ ಮುನ್ನಡೆಯಲು ತಂದೆ ಉತ್ತೇಜನ ನೀಡಿದರು" ಎಂದು ಬ್ರಿಗೇಡ್ ಆಫ್ ಗಾಡ್ರ್ಸ್ ಬೆಟಾಲಿಯನ್ನ ನಿವೃತ್ತ ಸುಬೇದಾರ್ ಕುಂದನ್ ಸಿಂಗ್ ಅವರ ಪುತ್ರಿಯಾದ ಬಿಸ್ಟ್ ವಿವರಿಸಿದರು.
"ಅದು ಸವಾಲುದಾಯಕ ಯುದ್ಧ. ಆದರೆ ಎಲ್ಲ ಸವಾಲುಗಳನ್ನು ನಾನು ಜಯಿಸಿದೆ" ಎಂದು ಆರ್ಮಿ ಆರ್ಡಿನೆನ್ಸ್ ಕಾಪ್ಸ್ಗೆ ನಿಯೋಜಿತರಾಗಿರುವ ಬಿಷ್ಟ್ ಬಣ್ಣಿಸಿದರು.
ಹಲವು ವರ್ಷಗಳ ಹೋರಾಟದ ಬಳಿಕ ಭಾರತೀಯ ಸೇನಾ ಕಮಿಷನ್ಗೆ ಪ್ರವೇಶ ಪಡೆದ ವೇದ್ ವಿಜಯ ನಿಯೋಗ್ ಕೂಡಾ ಅಧಿಕಾರಿಯಾಗಿ ನಿಯೋಜಿತರಾದರು. ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದ ಬಳಿಕ ಕುಟುಂಬದ ಸಂಕಷ್ಟದ ಹಿನ್ನೆಲೆಯಲ್ಲಿ ವೇದ್ ವಾಪಾಸ್ಸಾಗಿದ್ದರು. ದೆಹಲಿಯಲ್ಲಿ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಹಗಲು ಕಾಫಿ ಮಾಡುವುದು, ರಾತ್ರಿ ಆಹಾರ ವಿತರಣೆಯ ಕೆಲಸವನ್ನು ಜೀವನೋಪಾಯಕ್ಕಾಗಿ ಮಾಡುತ್ತಿದ್ದರು. ಬಳಿಕ ಪ್ರವಾಸಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೂ ಸೇನಾಧಿಕಾರಿಯ ಸಮವಸ್ತ್ರ ಧರಿಸಬೇಕೆಂಬ ಅದಮ್ಯ ಆಸೆ ಕೊನೆಗೂ ಕೈಗೂಡಿತು. ಸಿಡಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು.
ಈ ಇಬ್ಬರು ಸೇರಿದಂತೆ 133 ಮಂದಿ ಅಧಿಕಾರಿಗಳು ಹಾಗೂ 24 ಮಂದಿ ಮಹಿಳಾ ಅಧಿಕಾರಿಗಳು ನಿಯೋಜಿತರಾದರು. ಐದು ದೇಶಗಳಿಗೆ ಸೇರಿದ ಐದು ಮಂದಿ ವಿದೇಶಿ ಕೆಡೆಟ್ಗಳು ಮತ್ತು ಏಳು ಮಂದಿ ವಿದೇಶಿ ಅಧಿಕಾರಿ ಕೆಡೆಟ್ಗಳು ಕೂಡಾ ತರಬೇತಿಯಲ್ಲಿ ಯಶಸ್ವಿಯಾಗಿ ಪೂರೈಸಿದರು.







