ಪ್ರಿಯಕರನಿಂದ ಪತಿಯ ಹತ್ಯೆ ಮಾಡಿಸಿದ ಪತ್ನಿ; ಆರೋಪಿಗಳು ಪೊಲೀಸ್ ವಶಕ್ಕೆ

ಅಂಜಲಿ |ರಾಹುಲ್|ಅಜಯ್ PC: x.com/ndtv
ಮೀರಠ್: ಅಕ್ರಮ ಪ್ರೇಮಸಂಬಂಧ ಬಹಿರಂಗವಾದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ಪ್ರಿಯಕರನಿಂದ ಹತ್ಯೆ ಮಾಡಿಸಿದ ಘಟನೆ ಉತ್ತರ ಪ್ರದೇಶದ ಮೀಠರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಹೊರವಲಯದ ಹೊಲದಲ್ಲಿ ಮೂರು ಗುಂಡಿನ ಗುರುತುಗಳೊಂದಿಗೆ ಪತಿ ರಾಹುಲ್ ನ ಶವ ಪತ್ತೆಯಾಗಿದೆ. ಆರಂಭದಲ್ಲಿ ದರೋಡೆ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಆಳವಾದ ತನಿಖೆ ನಡೆಸಿದಾಗ ಭಿನ್ನ ಕಥೆ ಅನಾವರಣಗೊಂಡಿದೆ.
ಪತ್ನಿ ಅಂಜಲಿಯ ವಿಚಾರಣೆಗೆ ಪೊಲೀಸರು ಮುಂದಾದಾಗ ಆಕೆ ಅಗ್ವಾನ್ ಪುರ ಗ್ರಾಮದ ತನ್ನ ಮನೆಯಿಂದ ನಾಪತ್ತೆಯಾಗಿರುವುದು ತಿಳಿದು ಬಂತು. ಬಳಿಕ ಆರೋಪಿ ಅಂಜಲಿ, ಅಜಯ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದು, ಬೆಳಕಿಗೆ ಬಂದಿದೆ. ಅಜಯ್ ನನ್ನು ಸಂಪರ್ಕಿಸಲು ಪೊಲೀಸರು ಮುಂದಾದಾಗ ಆತ ಕೂಡಾ ಊರು ಬಿಟ್ಟಿದ್ದು, ಇಬ್ಬರೂ ತಲೆಮರೆಸಿಕೊಂಡಿರುವುದು ತಿಳಿದುಬಂದಿದೆ.
ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಜಯ್ ಸತ್ಯ ಬಹಿರಂಗಪಡಿಸಿದ್ದಾನೆ. ರಾಹುಲ್ ಗೆ ತಮ್ಮ ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದಾಗ, ಅಂಜಲಿ ತನ್ನ ಪತಿಯ ಹತ್ಯೆಗೆ ಸಂಚು ಹೂಡಿದ್ದಾಳೆ. ಹೊಲದ ಬಳಿ ಭೇಟಿ ಮಾಡುವಂತೆ ಅಜಯ್ ರಾಹುಲ್ ಗೆ ಕೇಳಿಕೊಂಡಿದ್ದು, ಅಲ್ಲಿಗೆ ಬಂದಾಗ ಗುಂಡು ಹೊಡೆದು ಸಾಯಿಸಿದ್ದು ದೃಢಪಟ್ಟಿದೆ.
ಇದೇ ಜಿಲ್ಲೆಯಲ್ಲಿ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಕಾಜಲ್ ಎಂಬ ಮಹಿಳೆ ಪ್ರಿಯಕರನ ನೆರವಿನಿಂದ ಪತಿಗೆ ನಿದ್ರಾಜನಕ ಔಷಧ ನೀಡಿ ಬಳಿಕ ಬೈಕ್ ನಲ್ಲಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.







