ಮಹಾರಾಷ್ಟ್ರ | ಕಿರುಕುಳದಿಂದ ಬೇಸತ್ತು ಬಿಜೆಪಿ ನಾಯಕಿ ಪಂಕಜಾ ಮುಂಡೆಯ ಆಪ್ತ ಸಹಾಯಕನ ಪತ್ನಿ ಆತ್ಮಹತ್ಯೆ: ತನಿಖೆಗೆ ಆಗ್ರಹ

ಪಂಕಜಾ ಮುಂಡೆ | PC : X/@Pankajamunde
ಮುಂಬೈ: ಕೌಟುಂಬಿಕ ಕಲಹದಿಂದ ಬೇಸತ್ತು ಮಹಾರಾಷ್ಟ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಪಂಕಜಾ ಮುಂಡೆಯ ಆಪ್ತ ಸಹಾಯಕ ಅನಂತ್ ಗಾರ್ಜೆಯ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮುಂಬೈನ ವೊರ್ಲಿ ಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಡಾ. ಗೌರಿ ಪಲ್ವೆ ಎಂದು ಗುರುತಿಸಲಾಗಿದ್ದು, ಅವರು ಮುಂಬೈನ ಪರೇಲ್ ನಲ್ಲಿರುವ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ದಂತಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಸಾವಿಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದ್ದು, ವಿಸ್ತೃತ ತನಿಖೆ ಪ್ರಗತಿಯಲ್ಲಿದೆ.
ಇಂಜಿನಿಯರಿಂಗ್ ಪದವೀಧರರಾದ ಅನಂತ್ ಗಾರ್ಜೆ ಹಾಗೂ ಅವರ ಪತ್ನಿ ಗೌರಿ ಪಲ್ವೆ (27) ಫೆಬ್ರವರಿ 7, 2025ರಲ್ಲಿ ವಿವಾಹವಾಗಿದ್ದರು. ಶನಿವಾರ ಸಂಜೆ ಅವರ ಮೃತದೇಹವು ವೊರ್ಲಿಯಲ್ಲಿನ ಆಕೆಯ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಸಂಬಂಧ ವೊರ್ಲಿ ಠಾಣೆಯ ಪೊಲೀಸರು ಆಕಸ್ಮಿಕ ಸಾವು ವರದಿ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ.
ಘಟನೆಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ರಾಜ್ಯ ಪಶು ಸಂಗೋಪನೆ ಮತ್ತು ಪರಿಸರ ಸಚಿವೆ ಪಂಕಜಾ ಮುಂಡೆ, ಈ ಘಟನೆಯ ಕುರಿತು ಆಳವಾದ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.







