ಹವಾಮಾನ ಯೋಜನೆಯ ಭಾಗವಾಗಿ ಪತ್ನಿ ತೆರಳಿದ್ದರು, ನಾನೂ ಒಮ್ಮೆ ಭೇಟಿ ನೀಡಿದ್ದೆ: ಪಾಕಿಸ್ತಾನದ ಸಂಪರ್ಕ ಆರೋಪದ ಕುರಿತು ಗೌರವ್ ಗೊಗೊಯ್ ಸ್ಪಷ್ಟನೆ

ಗೌರವ್ ಗೊಗೊಯ್ | PTI
ಹೊಸದಿಲ್ಲಿ: ತನಗೆ ಹಾಗೂ ತನ್ನ ಪತ್ನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕವಿದೆ ಎಂಬ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಆರೋಪಕ್ಕೆ ಬುಧವಾರ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಹಾಗೂ ಅಸ್ಸಾಂ ಕಾಂಗ್ರೆಸ್ ರಾಜ್ಯಾಧ್ಯ ಕ್ಷ ಗೌರವ್ ಗೊಗೊಯಿ, ಹವಾಮಾನ ಬದಲಾವಣೆ ಬಗೆಗಿನ ಅಂತಾರಾಷ್ಟ್ರೀಯ ಯೋಜನೆಯೊಂದರಲ್ಲಿ ಕೆಲಸ ಮಾಡುವಾಗ ನನ್ನ ಪತ್ನಿ ಪಾಕಿಸ್ತಾನದಲ್ಲಿ ಕೆಲ ಕಾಲ ಕಳೆದಿದ್ದರು. 2013ರಲ್ಲಿ ನಾನೂ ಕೂಡಾ ಒಮ್ಮೆ ಆಕೆಯೊಂದಿಗೆ ಅಲ್ಲಿಗೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾನು ಪಾಕಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದೆ ಹಾಗೂ ಅಲ್ಲಿ ತರಬೇತಿಗೊಳಗಾಗಿದ್ದೆ ಎಂಬ ಬಿಜೆಪಿಯ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಗೌರವ್ ಗೊಗೊಯಿ, “ಸುಮಾರು 14-15 ವರ್ಷಗಳ ಹಿಂದೆ ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಹೆಸರಾಂತ ತಜ್ಞೆಯಾದ ನನ್ನ ಪತ್ನಿ, ದಕ್ಷಿಣ ಏಶ್ಯವನ್ನು ಗಮನದಲ್ಲಿರಿಸಿಕೊಂಡು ನಡೆದಿದ್ದ ಹವಾಮಾನ ಬದಲಾವಣೆ ಬಗೆಗಿನ ಅಂತಾರಾಷ್ಟ್ರೀಯ ಯೋಜನೆಯೊಂದರಲ್ಲಿ ಕೆಲಸ ಮಾಡಿದ್ದರು. ಸುಮಾರು 2012-13ರ ನಡುವೆ ಭಾರತಕ್ಕೆ ಮರಳುವುದಕ್ಕೂ ಮುನ್ನ, ಆಕೆ ಪಾಕಿಸ್ತಾನದಲ್ಲಿ ಕೆಲ ಸಮಯ ಅಲ್ಲಿ ಕಳೆದಿದ್ದಳು. ನಾನೂ ಕೂಡಾ ಸುಮಾರು 2013ರಲ್ಲಿ ಆಕೆಯೊಂದಿಗೆ ಅಲ್ಲಿಗೆ ತೆರಳಿದ್ದ ನೆನಪಿದೆ” ಎಂದು ಹೇಳಿದ್ದಾರೆ.
“ಅವರ ವರ್ತನೆಗಳು ಕೇವಲ ತುಚ್ಛವಾಗಿರುವುದರಿಂದ, ಅವರು ಈ ಸಂಗತಿಯನ್ನು ಬಳಸಿಕೊಂಡು ವಿವಾದವೊಂದನ್ನು ಸೃಷ್ಟಿಸುತ್ತಿದ್ದಾರೆ” ಎಂದೂ ಅವರು ಆರೋಪಿಸಿದ್ದಾರೆ. ನನ್ನ ವಿರುದ್ಧದ ಆರೋಪಗಳು ಬಿಜೆಪಿ ರಚಿಸಿರುವ ಬಾಲಿವುಡ್ ನ ಮೂರನೆ ದರ್ಜೆಯ ಸಿನಿಮಾದ ಚಿತ್ರಕತೆಯಂತಿವೆ ಎಂದೂ ಅವರು ಅಲ್ಲಗಳೆದಿದ್ದಾರೆ.
ಈ ಸಂಬಂಧ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧ ವಾಗ್ದಾಳಿ ನಡೆಸಿದ ಗೌರವ್ ಗೊಗೊಯಿ, “ಅವರಿಗೆ ಜನರನ್ನು ವಂಚಿಸುವ ಹಳೇ ಚಾಳಿಯಿದೆ” ಎಂದು ವ್ಯಂಗ್ಯವಾಡಿದ್ದಾರೆ. ಈ ವೇಳೆ, 2024ರಲ್ಲಿ ನಡೆದಿದ್ದ ಭಾರತ್ ಜೋಡೊ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ತದ್ರೂಪು ವ್ಯಕ್ತಿಯನ್ನು ಬಳಸಿದ್ದರು ಎಂದು ಆರೋಪಿಸಿದ್ದ ಹಿಮಂತ್ ಬಿಸ್ವ ಶರ್ಮರ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.
“ಅವರೀಗ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ನನ್ನ ತದ್ರೂಪಿನ ಕುರಿತೂ ಚಿಂತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ” ಎಂದು ಅವರು ಛೇಡಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬುಧವಾರ ಗೌರವ್ ಗೊಗೊಯಿ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಮತ್ತೊಂದು ಹೇಳಿಕೆಯನ್ನು ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, “ಅಂತಿಮವಾಗಿ ತಾನು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಒಪ್ಪಿಕೊಂಡಿದ್ದಾರೆ. ಆದರಿದು ಕೇವಲ ಪ್ರಾರಂಭವೇ ಹೊರತು, ಅಂತಿಮವಲ್ಲ ಎಂಬ ಸಂಗತಿ ನಮಗೆ ತಿಳಿದಿರಬೇಕಿದೆ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಗೌರವ್ ಗೊಗೊಯಿ ಅವರ ಪತ್ನಿ ಎಲಿಝಬೆತ್ ಕಾಲ್ಬರ್ನ್ ಅವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕವಿದೆ ಎಂದು ಪದೇ ಪದೇ ಆರೋಪಿಸಿದ್ದ ಹಿಮಂತ ಬಿಸ್ವ ಶರ್ಮ, ಭಾರತ ಮತ್ತು ಪಾಕಿಸ್ತಾನದ ನಡುವೆ 19 ಬಾರಿ ಪ್ರಯಾಣಿಸಿದ್ದ ಎಲಿಝಬೆತ್ ಕಾಲ್ಬರ್ನ್ಗೆ ಪಾಕಿಸ್ತಾನದ ಸೇನೆ ಹಾಗೂ ಐಎಸ್ಐನೊಂದಿಗೆ ಸಂಪರ್ಕವಿದೆ ಎಂದೂ ದೂರಿದ್ದರು.
ಇದರೊಂದಿಗೆ, ಗೌರವ್ ಗೊಗೊಯಿ ಕೂಡಾ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಅವರು ತರಬೇತಿಗೊಳಗಾಗಿದ್ದರು ಎಂದೂ ಹಿಮಂತ ಬಿಸ್ವ ಶರ್ಮ ಆರೋಪಿಸಿದ್ದರು. ಪಾಕಿಸ್ತಾನದ ಗೃಹ ಖಾತೆ ವಿಭಾಗದಿಂದ ಗೌರವ್ ಗೊಗೊಯಿ ಆಮಂತ್ರಣ ಪತ್ರವೊಂದನ್ನು ಸ್ವೀಕರಿಸಿದ್ದರು ಹಾಗೂ ಭಾರತೀಯ ಪ್ರಾಧಿಕಾರಗಳಿಗೆ ಈ ಕುರಿತು ಯಾವುದೇ ಮಾಹಿತಿ ನೀಡದೆ, ಪಾಕಿಸ್ತಾನದಲ್ಲಿ 15 ದಿನಗಳ ಕಾಲ ಉಳಿದುಕೊಂಡಿದ್ದರು ಎಂದೂ ಅವರು ಆಪಾದಿಸಿದ್ದರು.
ಸೌಜನ್ಯ: indiatoday.in







