ಸಂಭಾಜಿ ಮಹಾರಾಜರ ಕುರಿತ ಆಕ್ಷೇಪಾರ್ಹ ಬರಹ; ವಿಕಿಪೀಡಿಯಾದ ನಾಲ್ವರು ಸಂಪಾದಕರ ವಿರುದ್ಧ ಪ್ರಕರಣ ದಾಖಲು

ಛತ್ರಪತಿ ಸಂಭಾಜಿ ಮಹಾರಾಜ | PC : X
ಹೊಸದಿಲ್ಲಿ: ವಿಕಿಪೀಡಿಯಾದಿಂದ ಛತ್ರಪತಿ ಸಂಭಾಜಿ ಮಹಾರಾಜರ ಕುರಿತು ಆಕ್ಷೇಪಾರ್ಹ ವಿಷಯ ತೆಗೆದು ಹಾಕದ ವಿಕಿಪೀಡಿಯಾದ ಕನಿಷ್ಠ ನಾಲ್ವರು ಸಂಪಾದಕರ ವಿರುದ್ಧ ಮಹಾರಾಷ್ಟ್ರ ಸೈಬರ್ ಸಂಸ್ಥೆ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಸೈಬರ್ ಸಂಸ್ಥೆ ಕ್ಯಾಲಿಫೋರ್ನಿಯಾ ಮೂಲದ ವಿಕಿಮೀಡಿಯಾ ಫೌಂಡೇಶನ್ಗೆ ನೋಟಿಸು ರವಾನಿಸಿತ್ತು. ವಿಕಿಪೀಡಿಯಾದಿಂದ ಈ ವಿಷಯವನ್ನು ಅಳಿಸುವಂತೆ ವಿನಂತಿಸಿತ್ತು. ವಿಕಿಮೀಡಿಯಾ ಫೌಂಡೇಶನ್ ಪಿಕಿಪೀಡಿಯಾವನ್ನು ನಡೆಸುತ್ತಿರುವ ಲಾಭ ರಹಿತ ಸಂಸ್ಥೆ.
ವಿಕಿಪೀಡಿಯಾದ ವಿಷಯ ಸರಿಯಾಗಿಲ್ಲ. ಅಲ್ಲದೆ ಸಂಭಾಜಿ ಮಹಾರಾಜ ಭಾರತದಲ್ಲಿ ಗೌರವಾನ್ವಿತರಾಗಿರುವ ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ರರಾಗಿರುವುದರಿಂದ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡಲು ಕಾರಣವಾಗಬಹುದು ಎಂದು ಮಹಾರಾಷ್ಟ್ರ ಸೈಬರ್ ಸಂಸ್ಥೆ ವಿಕಿಮೀಡಿಯಾಕ್ಕೆ ನೀಡಿದ ನೋಟಿಸಿನಲ್ಲಿ ಹೇಳಿತ್ತು.
ವಿಕಿಪೀಡಿಯಾದಲ್ಲಿ ಪೋಸ್ಟ್ ಮಾಡಲಾದ ಮಾಹಿತಿಗಳು ಸಂಭಾಜಿ ಮಹಾರಾಜರ ಅನುಯಾಯಿಗಳಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ನೋಟಿಸಿನಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ, ಈ ವಿಷಯವನ್ನು ತೆಗೆದು ಹಾಕುವ ಕುರಿತು ವಿಕಿಮೀಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೈಬರ್ ಸಂಸ್ಥೆ ವಿಕಿಪೀಡಿಯಾದ ಕನಿಷ್ಠ ನಾಲ್ವರು ಸಂಪಾದಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.







