ಲಾಸ್ ಏಂಜಲೀಸ್ ನಲ್ಲಿ ಮತ್ತೆ ಕಾಡ್ಗಿಚ್ಚು: 31 ಸಾವಿರ ಮಂದಿ ಸ್ಥಳಾಂತರಕ್ಕೆ ಆದೇಶ

PC: x.com/BreakinNewz01
ಕಾಸ್ಟಾಯಿಕ್, ಅಮೆರಿಕ: ಲಾಸ್ ಏಂಜಲೀಸ್ ನಲ್ಲಿ ಬುಧವಾರ ಹೊಸ ಕಾಡ್ಗಿಚ್ಚು ಭುಗಿಲೆದ್ದಿದ್ದು, ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಎರಡು ಮಾರಕ ಕಾಡ್ಗಿಚ್ಚಿನಿಂದ ಜರ್ಜರಿತವಾಗಿರುವ ಪ್ರದೇಶದಲ್ಲಿ ಮತ್ತೆ 31 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಕಾಸ್ಟಾಯಿಕ್ ಸರೋವರದ ಪಕ್ಕದ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು, ಕೆಲವೇ ಗಂಟೆಗಳಲ್ಲಿ 8000 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ.
ಒಣ ಹಾಗೂ ಪ್ರಬಲ ಸ್ಯಾಂಟಾ ಅನಾ ಗಾಳಿಯಿಂದಾಗಿ ಕಾಡ್ಗಿಚ್ಚು ಕ್ಷಿಪ್ರವಾಗಿ ಹರಡುತ್ತಿದೆ. ದಟ್ಟ ಹೊಗೆ ಇಡೀ ಪ್ರದೇಶದಲ್ಲಿ ಮುಸುಕಿದ್ದು, ಅಪಾಯಕಾರಿ ಬೆಂಕಿಯ ಕೆನ್ನಾಲಿಗೆ ಆತಂಕಕಾರಿಯಾಗಿ ವ್ಯಾಪಿಸುತ್ತಿದೆ. ಉತ್ತರ ಲಾಸ್ ಏಂಜಲೀಸ್ ನ 56 ಕಿಲೋಮೀಟರ್ ಸರಹದ್ದಿನಲ್ಲಿ ಬೆಂಕಿ ವ್ಯಾಪಿಸುವ ಭೀತಿಯ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಉತ್ತರ ಲಾಸ್ ಏಂಜಲೀಸ್ ನಲ್ಲಿ ಹೊಸ ಕಾಡ್ಗಿಚ್ಚು ಭುಗಿಲೇಳುವ ಬಗ್ಗೆ ತುರ್ತು ಎಚ್ಚರಿಕೆಯನ್ನು ನೀಡಲಾಗಿದೆ. "ನಮ್ಮ ಮನೆ ಸುಟ್ಟುಹೋಗದಿರಲಿ ಎಂದು ಪ್ರಾರ್ಥಿಸುತ್ತಿದ್ದೇನೆ" ಎಂದು ವ್ಯಕ್ತಿಯೊಬ್ಬರು ಉದ್ಗರಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ಎರಡು ಭೀಕರ ಕಾಡ್ಗಿಚ್ಚಿನಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಕಟ್ಟಡಗಳು ಭಸ್ಮವಾಗಿದ್ದವು.





