ವನ್ಯಜೀವಿ ಛಾಯಾಗ್ರಹಣ ನಿರತ ʼಜಂಬೋʼ; ಕ್ಯಾಮರಾದಲ್ಲಿ ಎರಡು ಹುಲಿ ಸೆರೆ
ವೀಡಿಯೊ ಹಂಚಿಕೊಂಡ ಕ್ರಿಕೆಟಿಗ ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ | Photo: @anilkumble1074 \ X
ಚಂದ್ರಾಪುರ (ಮಹಾರಾಷ್ಟ್ರ): ಇತ್ತೀಚೆಗೆ ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ʼಜಂಬೋʼ ಖ್ಯಾತಿಯ ಅನಿಲ್ ಕುಂಬ್ಳೆ ವನ್ಯಜೀವಿ ಛಾಯಾಗ್ರಹಣದಲ್ಲಿ ನಿರತರಾಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರ ಕ್ಯಾಮರಾಗೆ ಎರಡು ಹುಲಿಗಳು ಸೆರೆಯಾಗಿವೆ.
‘Through the lens’ ಎಂಬ ಶೀರ್ಷಿಕೆಯೊಂದಿಗೆ ಅನಿಲ್ ಕುಂಬ್ಳೆ ಈ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೊದಲ್ಲಿ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಜೀಪಿನ ಹಿಂಬದಿ ಆಸನದಲ್ಲಿ ಕುಳಿತಿರುವ ಕುಂಬ್ಳೆ, ತಮ್ಮ ಕ್ಯಾಮೆರಾ ಮೂಲಕ ಪ್ರಕೃತಿಯನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣುತ್ತಿದೆ. ಹುಲಿ ಸಂರಕ್ಷಿತಾರಣ್ಯಕ್ಕೆ ತೆರಳುವ ಇಕ್ಕಟ್ಟಾದ ರಸ್ತೆಯ ಮೂಲಕ ತೆರಳುತ್ತಿರುವ ಜೀಪಿನ ಚಾಲಕ, ಆ ಮಾರ್ಗದಲ್ಲಿ ಎರಡು ಹುಲಿಗಳನ್ನು ಕಂಡ ನಂತರ ಜೀಪನ್ನು ಹಿಂದಕ್ಕೆ ಚಲಾಯಿಸಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.
Through the lens. #TadobaNationalPark pic.twitter.com/JFeLUCRknr
— Anil Kumble (@anilkumble1074) January 13, 2024
ಅನಿಲ್ ಕುಂಬ್ಳೆ ಅತ್ಯುತ್ತಮ ಕ್ರಿಕೆಟಿಗ ಮಾತ್ರವಲ್ಲದೆ, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದಾರೆ. ಅವರು ಸೆರೆ ಹಿಡಿದಿರುವ ಹಲವಾರು ವನ್ಯಜೀವಿ ಛಾಯಾಚಿತ್ರಗಳು ಆಸಕ್ತರ ಮೆಚ್ಚುಗೆಗೆ ಪಾತ್ರವಾಗಿವೆ. ತಮ್ಮ ವನ್ಯಜೀವಿ ಛಾಯಾಗ್ರಹಣ ಪುಸ್ತಕವನ್ನೂ ಅವರು ಹೊರತಂದಿದ್ದಾರೆ.







