ಬಾಂಗ್ಲಾದೇಶಿ ವಲಸಿಗರ ಗುರುತಿಸಲು AI ಸಾಧನವನ್ನು ಅಭಿವೃದ್ಧಿಪಡಿಸಲಾಗುವುದು: ಮಹಾರಾಷ್ಟ್ರ ಸಿಎಂ ಫಡ್ನವೀಸ್

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (File Photo: PTI)
ಮುಂಬೈ: ಮುಂಬರುವ ಮುಂಬೈ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾಯುತಿ ಮೈತ್ರಿಕೂಟವು ರವಿವಾರ ಸಮಗ್ರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.
ನಗರವನ್ನು ‘ಬಾಂಗ್ಲಾದೇಶಿ ವಲಸಿಗರು ಹಾಗೂ ರೋಹಿಂಗ್ಯಾಗಳಿಂದ ಮುಕ್ತಗೊಳಿಸುವುದು’ ಮೈತ್ರಿಕೂಟದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಹಕಾರದೊಂದಿಗೆ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ AI ಸಾಧನವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಫಡ್ನವೀಸ್, ಭ್ರಷ್ಟಾಚಾರ ನಿಯಂತ್ರಣ, ಅನುಮತಿ ಪ್ರಕ್ರಿಯೆಗಳ ಸರಳೀಕರಣ ಹಾಗೂ ನಾಗರಿಕ ಸೇವೆಗಳ ಸುಧಾರಣೆಗೆ ಕೃತಕ ಬುದ್ಧಿಮತ್ತೆ (AI) ಬಳಕೆಯಾಗಲಿದೆ ಎಂದು ಹೇಳಿದರು. ‘ನಿಮ್ಮ ಮೊಬೈಲ್ ನಲ್ಲಿ ಪುರಸಭೆ’ ಉಪಕ್ರಮದ ಮೂಲಕ ಪುರಸಭಾ ಸೇವೆಗಳನ್ನು ನಾಗರಿಕರ ಮೊಬೈಲ್ ಗಳಿಗೆ ನೇರವಾಗಿ ತಲುಪಿಸುವ ಗುರಿ ಹೊಂದಲಾಗಿದೆ ಎಂದರು.
ಈ ಪ್ರಣಾಳಿಕೆಯಲ್ಲಿ ನಗರವನ್ನು ‘ಜಾಗತಿಕ ಶಕ್ತಿ ಕೇಂದ್ರ’ವನ್ನಾಗಿ ರೂಪಿಸುವ ಗುರಿಯೊಂದಿಗೆ ತಂತ್ರಜ್ಞಾನಾಧಾರಿತ ಆಡಳಿತ, ಪಾರದರ್ಶಕತೆ ಮತ್ತು ವೇಗದ ಸೇವಾ ವಿತರಣೆಗೆ ಒತ್ತು ನೀಡಲಾಗಿದೆ.
ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯಗಳ ಭರವಸೆ ನೀಡಲಾಗಿದೆ. ಬೆಸ್ಟ್ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ 50 ಶೇಕಡಾ ಶುಲ್ಕ ರಿಯಾಯಿತಿ, ಬಸ್ಗಳ ಸಂಖ್ಯೆಯನ್ನು 5,000ರಿಂದ 10,000ಕ್ಕೆ ಹೆಚ್ಚಿಸುವುದು, ಎಲೆಕ್ಟ್ರಿಕ್ ಬಸ್ಗಳ ಪರಿಚಯ ಹಾಗೂ ಮೆಟ್ರೋ–ರೈಲು ನಿಲ್ದಾಣಗಳ ಬಳಿ ‘ಮಿನಿ’ ಮತ್ತು ‘ಮಿಡಿ’ ಬಸ್ ಸೇವೆಗಳ ಮೂಲಕ ಕೊನೆಯ ಮೈಲಿ ಸಂಪರ್ಕ ವಿಸ್ತರಣೆ ಯೋಜನೆಗಳಿವೆ.
‘ಪ್ರವಾಹ ಮುಕ್ತ ಮುಂಬೈ’ ಯೋಜನೆಯಡಿ ಜಪಾನ್ ಮಾದರಿಯ ತಂತ್ರಜ್ಞಾನ ಅಳವಡಿಕೆಗೆ ಪ್ರಣಾಳಿಕೆ ಭರವಸೆ ನೀಡಿದೆ. ಐದು ವರ್ಷಗಳಲ್ಲಿ ನಗರವನ್ನು ಪ್ರವಾಹದಿಂದ ಮುಕ್ತಗೊಳಿಸುವ ಗುರಿಯೊಂದಿಗೆ ನಾಲ್ಕು ಹೊಸ ಅಂತರ್ಗತ ಮಳೆನೀರು ಸಂಗ್ರಹ ಟ್ಯಾಂಕ್ ಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆಯ ನವೀಕರಣ ಹಾಗೂ ಬ್ರಿಮ್ಸ್ಟೋವಾಡ್–2 ಯೋಜನೆಗೆ ವೇಗ ನೀಡಲಾಗುತ್ತದೆ. ಹವಾಮಾನ ಕ್ರಿಯಾ ಯೋಜನೆಗಾಗಿ 17,000 ಕೋಟಿ ರೂ.ಗಳನ್ನು ಮೀಸಲಿಡಲಾಗುತ್ತದೆ ಎಂದು ಘೋಷಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ಪುರಸಭಾ ಶಾಲೆಗಳಲ್ಲಿ AI ಪ್ರಯೋಗಾಲಯಗಳ ಸ್ಥಾಪನೆಗೆ ಭರವಸೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ನಾಗರಿಕ ಆಸ್ಪತ್ರೆಗಳನ್ನು ಏಮ್ಸ್ ಮಾನದಂಡಗಳಿಗೆ ಮೇಲ್ದರ್ಜೆಗೇರಿಸುವುದು ಹಾಗೂ ಪ್ರತಿಯೊಬ್ಬ ಮುಂಬೈಕರ ವೈದ್ಯಕೀಯ ಇತಿಹಾಸವನ್ನು ದಾಖಲಿಸುವ ಡಿಜಿಟಲ್ ಆರೋಗ್ಯ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ. ವಸತಿ ಕ್ಷೇತ್ರದಲ್ಲಿ ‘ಪಗಡಿಮುಕ್ತ್ ಮುಂಬೈ’ ಉಪಕ್ರಮದ ಮೂಲಕ ಬಾಡಿಗೆ ಸಮಸ್ಯೆ ಪರಿಹಾರ ಮತ್ತು 20,000 ಸ್ಥಗಿತಗೊಂಡ ಕಟ್ಟಡಗಳಿಗೆ ಆಕ್ಯುಪೆನ್ಸಿ ಪ್ರಮಾಣಪತ್ರ ನೀಡುವ ಭರವಸೆ ನೀಡಲಾಗಿದೆ.
ಈ ವೇಳೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, ಆಧುನೀಕರಣದ ಜೊತೆಗೆ ಮರಾಠಿ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎಂದರು. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಸಾಂಸ್ಕೃತಿಕ ವಿಭಾಗ ಸ್ಥಾಪನೆ, ಮರಾಠಿ ಗ್ರಂಥಾಲಯಗಳು, ಸಾಂಸ್ಕೃತಿಕ ಕೇಂದ್ರಗಳು ಹಾಗೂ ಮರಾಠಿ ಯುವಕರಿಗಾಗಿ ‘ಮುಂಬೈ ಫೆಲೋಶಿಪ್’ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.
ಕೋಲಿ ಸಮುದಾಯ ಸೇರಿದಂತೆ ನಗರದ ಮೂಲ ನಿವಾಸಿಗಳ ಗುರುತು ಮತ್ತು ಜೀವನೋಪಾಯ ರಕ್ಷಣೆಗೆ ‘ಕೋಲಿವಾಡಾ’ ಮತ್ತು ‘ಗಾಥಾನ’ ಪುನರಾಭಿವೃದ್ಧಿ ಯೋಜನೆಗಳನ್ನೂ ಪ್ರಣಾಳಿಕೆ ಒಳಗೊಂಡಿದೆ.







