ಪಾಕ್ನೊಂದಿಗೆ ಉದ್ವಿಗ್ನತೆಯ ನಡುವೆ ಟರ್ಕಿ, ಅಝರ್ಬೈಜಾನ್ ಜೊತೆ ಭಾರತದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಲಿದೆಯೇ?

PC : freepik.com
ಹೊಸದಿಲ್ಲಿ: ಭಾರತವು ಟರ್ಕಿ ಮತ್ತು ಅಝರ್ಬೈಜಾನ್ ಜೊತೆ ಬಲವಾದ ವ್ಯಾಪಾರ ಮೌಲ್ಯಗಳನ್ನು ಹೊಂದಿದ್ದು, ಅವುಗಳೊಂದಿಗೆ ವಹಿವಾಟುಗಳ ಮೌಲ್ಯ 12 ಶತಕೋಟಿ ಡಾಲರ್ ಗೂ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ಈ ದೇಶಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಭಾರತ-ಪಾಕಿಸ್ತಾನ ನಡುವಿನ ಪ್ರಸಕ್ತ ಗಡಿ ಉದ್ವಿಗ್ನತೆಯು ಈ ದೇಶಗಳಿಗೆ ತೆರಳುವ ಭಾರತೀಯ ಪ್ರವಾಸಿಗಳ ಮೇಲೆ ಪರಿಣಾಮ ಬೀರಬಹುದು. ಟರ್ಕಿ ಮತ್ತು ಅಝರ್ಬೈಜಾನ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಕೆಲವು ಪ್ರವಾಸ ಕಂಪನಿಗಳು ಈ ದೇಶಗಳಿಗೆ ಅನಗತ್ಯ ಭೇಟಿಗಳನ್ನು ತಪ್ಪಿಸುವಂತೆ ಭಾರತೀಯರಿಗೆ ಸಲಹೆ ನೀಡಿವೆ.
ಇವೆರಡೂ ದೇಶಗಳು ಭಾರತದ ಪ್ರಮುಖ ವ್ಯಾಪಾರ ಪಾಲುದಾರರೂ ಹೌದು, ಹೀಗಿರುವಾಗ ಪಾಕ್ ಜೊತೆಗಿನ ಉದ್ವಿಗ್ನತೆಯು ಪ್ರವಾಸೋದ್ಯಮವನ್ನು ಮೀರಿ ಈ ದೇಶಗಳೊಂದಿಗೆ ಭಾರತದ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರಲಿದೆ?
► ಅಝರ್ಬೈಜಾನ್:
ಅಝರ್ಬೈಜಾನ್ ಭಾರತಕ್ಕೆ ಪ್ರಮುಖ ತೈಲ ಪೂರೈಕೆ ಮಾಡುವ ದೇಶವಾಗಿದೆ. 2023ರಲ್ಲಿ 1.227 ಶತಕೋಟಿ ಡಾಲರ್ ಮೌಲ್ಯದ ಕಚ್ಚಾತೈಲವನ್ನು ಖರೀದಿಸುವ ಮೂಲಕ ಭಾರತವು ಆ ದೇಶದಿಂದ ಮೂರನೇ ಅತಿ ದೊಡ್ಡ ತೈಲ ಖರೀದಾರನಾಗಿತ್ತು.
ಈ ಎಲ್ಲ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಗಮನಾರ್ಹವಾಗಿ ಬೆಳೆದಿದ್ದು, 2005ಲ್ಲಿ 50 ಮಿಲಿಯನ್ ಡಾಲರ್ ಇದ್ದುದು 2023ರಲ್ಲಿ 1.435 ಶತಕೋಟಿ ಡಾಲರ್ಗೆ ಏರಿಕೆಯಾಗಿತ್ತು. ಜೊತೆಗೆ ಭಾರತವು ಅಝರ್ಬೈಜಾನ್ ನಿಂದ 1.235 ಶತಕೋಟಿ ಡಾಲರ್ ಗಳ ಸರಕುಗಳನ್ನು ಆಮದು ಮಾಡಿಕೊಂಡು, 201 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆ ದೇಶಕ್ಕೆ ರಫ್ತು ಮಾಡಿತ್ತು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಝರ್ಬೈಜಾನ್ ಭಾರತೀಯ ಪ್ರವಾಸಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ. 2022ರಲ್ಲಿ 60,731 ಭಾರತೀಯರು ಆ ದೇಶಕ್ಕೆ ಭೇಟಿ ನೀಡಿದ್ದರೆ 2023ರಲ್ಲಿ ಈ ಸಂಖ್ಯೆ 1.17 ಲಕ್ಷಕ್ಕೆ ಜಿಗಿದಿತ್ತು. 2024ರಲ್ಲಿ 2.43 ಲಕ್ಷ ಭಾರತೀಯರು ಅಲ್ಲಿಗೆ ಭೇಟಿ ನೀಡಿದ್ದರು. ಈಗ ವಾರಕ್ಕೊಮ್ಮೆ ಇಂಡಿಗೋದ ಏಳು ಮತ್ತು ಅಝರ್ಬೈಜಾನ್ ಏರ್ಲೈನ್ಸ್ನ ಮೂರು ಸೇರಿದಂತೆ ದಿಲ್ಲಿಯಿಂದ ಅಝರ್ಬೈಜಾನ್ ರಾಜಧಾನಿ ಬಾಕುಗೆ 10 ನೇರ ವಿಮಾನಯಾನಗಳಿವೆ. ಆ ದೇಶಕ್ಕೆ ಭೇಟಿ ನೀಡುವವರಲ್ಲಿ ರಷ್ಯಾ,ಟರ್ಕಿ ಮತ್ತು ಇರಾನ್ ಬಳಿಕ ಭಾರತೀಯ ಪ್ರವಾಸಿಗಳು ನಾಲ್ಕನೇ ಸ್ಥಾನದಲ್ಲಿದ್ದಾರೆ.
► ಟರ್ಕಿ:
ಇತ್ತೀಚಿನ ವರ್ಷಗಳಲ್ಲಿ ಟರ್ಕಿಯೊಂದಿಗೆ ಭಾರತದ ವ್ಯಾಪಾರವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. 2022-23ರಲ್ಲಿ ಉಭಯ ದೇಶಗಳ ನಡುವಿನ ಒಟ್ಟು ವ್ಯಾಪಾರ 13.8 ಶತಕೋಟಿ ಡಾಲರ್ ಗಳನ್ನು ದಾಟಿತ್ತು. 2023-24ರಲ್ಲಿ ವ್ಯಾಪಾರದ ಮೌಲ್ಯ 10.43 ಶತಕೋಟಿ ಡಾಲರ್ ಗಳಾಗಿದ್ದು, ಭಾರತವು 6.65 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು ಮತ್ತು 3.78 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.
ಟರ್ಕಿ ಭಾರತದಲ್ಲಿ ಹೂಡಿಕೆಯನ್ನೂ ಹೊಂದಿದೆ. ಎಪ್ರಿಲ್ 2000 ಮತ್ತು ಡಿಸೆಂಬರ್ 2023ರ ನಡುವೆ ಅದು ಒಟ್ಟು 227.5 ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆಯನ್ನು ಮಾಡಿದೆ. ಈ ನಡುವೆ ಆಗಸ್ಟ್ 2000 ಮತ್ತು ಮಾರ್ಚ್ 2024ರ ನಡುವೆ ಭಾರತೀಯ ಕಂಪನಿಗಳು ಟರ್ಕಿಯಲ್ಲಿ ಸುಮಾರು 200 ಮಿಲಿಯನ್ ಡಾಲರ್ ಗಳಷ್ಟು ಹೂಡಿಕೆಯನ್ನು ಮಾಡಿವೆ.
ಟರ್ಕಿ ಮತ್ತು ಅಝರ್ಬೈಜಾನ್ ಭಾರತೀಯರ ಪಾಲಿಗೆ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಟರ್ಕಿ ಕಳೆದ ವರ್ಷ 3.3 ಲ.ಭಾರತೀಯ ಪ್ರವಾಸಿಗಳನ್ನು ಸ್ವಾಗತಿಸಿತ್ತು. 2022ಕ್ಕೆ ಹೋಲಿಸಿದರೆ ಇದು ಶೇ.20.7ರಷ್ಟು ಏರಿಕೆಯಾಗಿದೆ.
ಆದರೆ ಭಾರತ-ಪಾಕಿಸ್ತಾನ ಗಡಿಯಲ್ಲಿನ ಪ್ರಸಕ್ತ ಉದ್ವಿಗ್ನತೆ ಮತ್ತು ಎರಡೂ ದೇಶಗಳು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿರುವುದರಿಂದ ಹಲವಾರು ಭಾರತೀಯ ಟ್ರಾವೆಲ್ ಪ್ಲ್ಯಾಟ್ಫಾರ್ಮ್ಗಳು ಎಚ್ಚರಿಕೆಗಳನ್ನು ಹೊರಡಿಸಿವೆ. ಕೆಲವು ಪ್ಲ್ಯಾಟ್ಫಾರ್ಮ್ಗಳು ಭಾರತೀಯ ಪ್ರವಾಸಿಗಳಿಂದ ಹೊಸ ಬುಕಿಂಗ್ಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿವೆ.
ಕೃಪೆ: indiatoday.in







