ಸಂದೇಶಕಾಳಿಗೆ ಶೀಘ್ರವೇ ಪ್ರಧಾನಿ ಮೋದಿ ಭೇಟಿ?

ನರೇಂದ್ರ ಮೋದಿ | Photo: PTI
ಕೋಲ್ಕತಾ : ಪಶ್ಚಿಮ ಬಂಗಾಳದ ಸಂದೇಶಕಾಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಜ್ಯದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಸೋಮವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಓರ್ವ ನಾಯಕ ಮತ್ತು ಆತನ ಬೆಂಬಲಿಗರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಸಂದೇಶಕಾಳಿಯ ಹಲವು ಮಹಿಳೆಯರು ಆರೋಪಿಸಿದ್ದಾರೆ.
ಪ್ರಧಾನಿ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ ಹಾಗೂ ಭೇಟಿಯ ದಿನಾಂಕವನ್ನು ಪ್ರಧಾನಿ ಕಚೇರಿಯು ಅಂತಿಮಗೊಳಿಸುತ್ತದೆ ಎಂದು ‘ಇಂಡಿಯಾ ಟುಡೆ’ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅಧಿಕಾರಿ ಹೇಳಿದ್ದಾರೆ.
ನಾರ್ತ್ 24 ಪರಗಣ ಜಿಲ್ಲೆಯಲ್ಲಿರುವ ಸಂದೇಶಕಾಳಿ ಗ್ರಾಮಕ್ಕೆ ಭೇಟಿ ನೀಡಲು ಕಲ್ಕತ್ತಾ ಹೈಕೋರ್ಟ್ನಿಂದ ಅನುಮತಿ ಪಡೆದ ಬಳಿಕ ಅಧಿಕಾರಿ ಮಾತನಾಡುತ್ತಿದ್ದರು. ಒಮ್ಮೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತರಾಗಿದ್ದ ಅಧಿಕಾರಿ 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಟಿಎಂಸಿ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ಭೂಅತಿಕ್ರಮಣ ಮಾಡಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂದೇಶಕಾಳಿಯ ಹಲವು ಮಹಿಳೆಯರು ಆರೋಪಿಸಿದ್ದಾರೆ.
ಸೋಮವಾರ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ನೇತೃತ್ವದಲ್ಲಿ ಆಯೋಗದ ನಿಯೋಗವೊಂದು ಸಂದೇಶಕಾಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಬೇಕು ಎಂದು ಆಯೋಗದ ಅಧ್ಯಕ್ಷೆ ಒತ್ತಾಯಿಸಿದ್ದಾರೆ.







