‘ಮೊದಲ ಎರಡು ಚರಣಗಳನ್ನು ಮಾತ್ರ ಹಾಡುತ್ತೇವೆ’: ʼವಂದೇ ಮಾತರಂʼ ಕುರಿತು ತನ್ನ ನಿಲುವು ಸ್ಪಷ್ಟಪಡಿಸಿದ ಕಾಂಗ್ರೆಸ್

Photo credit: PTI
ಹೊಸದಿಲ್ಲಿ: ಕಾಂಗ್ರೆಸ್ ನ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಬುಧವಾರ ನಿರ್ಧರಿಸಿದೆ. ವಂದೇ ಮಾತರಂ ವಾಚನದ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ರಾಷ್ಟ್ರಗೀತೆಯ ವಾಚನಕ್ಕೆ ಸಂಬಂಧಿಸಿದ ವಿವಾದದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. 1937ರ CWC ನಿರ್ಣಯವನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಮಹಾತ್ಮ ಗಾಂಧಿ, ರವೀಂದ್ರನಾಥ ಠಾಗೋರ್ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಪ್ರಮುಖ ನಾಯಕರು ವಂದೇ ಮಾತರಂನ ಸಾರ್ವಜನಿಕ ವಾಚನವನ್ನು ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸುವುದನ್ನು ಬೆಂಬಲಿಸಿದ್ದರು ಎಂದು ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಿಲ್ಲಿಯ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಕರೆದಿದ್ದ CWC ಸಭೆಯ ಬಳಿಕ AICC ಪ್ರಧಾನ ಕಾರ್ಯದರ್ಶಿ ಹಾಗೂ ಸಂಘಟನಾ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಕಾಂಗ್ರೆಸ್ ಅಧ್ಯಕ್ಷರು (ಖರ್ಗೆ) ಮಂಗಳವಾರವೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಇಂದು ಮತ್ತೊಮ್ಮೆ CWC ಇದನ್ನು ಚರ್ಚಿಸಿದೆ. ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. 1937ರ CWC ನಿರ್ಣಯಕ್ಕೆ ನಾವು ಬದ್ಧರಾಗಿರುತ್ತೇವೆ. ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್, ಸುಭಾಸ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರು ಕೈಗೊಂಡ ನಿರ್ಧಾರವನ್ನು ನಾವು ಪಾಲಿಸುತ್ತೇವೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮೊದಲ ಎರಡು ಚರಣಗಳನ್ನು ಮಾತ್ರ ಹಾಡುತ್ತಾರೆ’ ಎಂದು ವೇಣುಗೋಪಾಲ್ ಹೇಳಿದರು.
‘ಜನ ಗಣ ಮನ ಮತ್ತು ವಂದೇ ಮಾತರಂ ಕಾಂಗ್ರೆಸ್ಗೆ ಭಾವನಾತ್ಮಕ ವಿಷಯಗಳು. ಆದರೆ ಬಿಜೆಪಿಗೆ ಅವು ರಾಜಕೀಯ ವಿಷಯಗಳು. ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ ಇದೇ’ ಎಂದರು.
ಸಂವಹನ ವಿಭಾಗದ ಉಸ್ತುವಾರಿ AICC ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, CWC ಸಭೆಯಲ್ಲಿ ಖರ್ಗೆ ಅವರು 1937ರ CWC ನಿರ್ಣಯದ ಕೆಲವು ಭಾಗಗಳನ್ನು ಓದಿದರು ಎಂದು ತಿಳಿಸಿದರು.
‘ಇದರಲ್ಲಿ ಯಾವುದೇ ವಿವಾದವಿಲ್ಲ. ಇಂದಿನ ಸಮಸ್ಯೆಗಳು ಭಿನ್ನವಾಗಿದ್ದರೂ ಇದನ್ನು ಒಂದು ಸಮಸ್ಯೆಯಾಗಿ ಬಿಂಬಿಸಲಾಗುತ್ತಿದೆ. 1950ರ ಜನವರಿ 24ರಂದು ನಡೆದ ಭಾರತದ ಸಂವಿಧಾನ ಸಭೆಯ ಕೊನೆಯ ಸಭೆಯಲ್ಲಿ, ಅದರ ಅಧ್ಯಕ್ಷರಾಗಿದ್ದ ಹಾಗೂ ಭಾರತದ ಮೊದಲ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನವನ್ನು ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿ ಪುನರುಚ್ಚರಿಸಿದ್ದರು’ ಎಂದು ಜೈರಾಮ್ ರಮೇಶ್ ಹೇಳಿದರು.
ಬಿಜೆಪಿ ದಾಳಿ ಬಳಿಕ ಚರ್ಚೆ
AICC ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಹಾಗೂ ನಂತರ ಗೋವಾದಲ್ಲಿ ಖರ್ಗೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಿದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿತ್ತು. ಇದರ ಬೆನ್ನಲ್ಲೇ CWC ಸಭೆಯಲ್ಲಿ ವಂದೇ ಮಾತರಂ ವಿಚಾರವನ್ನು ಚರ್ಚಿಸಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲಾಯಿತು.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಕಾಯ್ದೆ, 2026 ಅನ್ನು ಅಂಗೀಕರಿಸಿದೆ. ವಂದೇ ಮಾತರಂ ಹಾಡುವುದನ್ನು ಅಥವಾ ನುಡಿಸುವುದನ್ನು ನಿಲ್ಲಿಸಲು ಅಥವಾ ತಡೆಯಲು ಪ್ರಯತ್ನಿಸುವುದನ್ನು ಈ ಕಾಯ್ದೆ ಅಪರಾಧವನ್ನಾಗಿ ಮಾಡುತ್ತದೆ.
ಮಂಗಳವಾರ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಹಾಡದಿದ್ದಕ್ಕಾಗಿ ಬಿಜೆಪಿ ಟೀಕಿಸಿದ ಹಿನ್ನೆಲೆಯಲ್ಲಿ ಖರ್ಗೆ ಪ್ರತಿಕ್ರಿಯಿಸಿದ್ದರು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರು ಹಾಡಿದ್ದ ವಂದೇ ಮಾತರಂನ ಅದೇ ಆವೃತ್ತಿಯನ್ನು ತಾವು ಹಾಡಿರುವುದಾಗಿ ಅವರು ಹೇಳಿದ್ದರು. ಆ ಆವೃತ್ತಿಯನ್ನು ಹಾಡುವುದೇ ಅಪರಾಧವಾಗಿದ್ದರೆ, ಸರಕಾರವು ದಿವಂಗತ ರಾಷ್ಟ್ರೀಯ ನಾಯಕರ ವಿರುದ್ಧವೂ FIR ದಾಖಲಿಸಬೇಕು ಎಂದು ಅವರು ವಾದಿಸಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ, ರಾಮ ಮಂದಿರದ ದೇಣಿಗೆ ವಿವಾದ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದ CWC ಸಭೆಯಲ್ಲಿ ಕಾಂಗ್ರೆಸ್ನ ಮುಂದಿನ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಿತು.
ಪರೀಕ್ಷಾ ಅಕ್ರಮಗಳ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಅಯೋಧ್ಯೆಯ ರಾಮ ಮಂದಿರದ ದೇಣಿಗೆ ‘ಕಳ್ಳತನ’ ಸೇರಿದಂತೆ ಹಲವು ವಿಷಯಗಳಲ್ಲಿ ಬಿಜೆಪಿ ಸರಕಾರದ ವಿರುದ್ಧ ದೇಶವ್ಯಾಪಿ ಅಭಿಯಾನ ನಡೆಸುವ ಕುರಿತು ಕಾರ್ಯತಂತ್ರ ರೂಪಿಸಲಾಯಿತು.
ರಾಹುಲ್ ಗಾಂಧಿ ನೇತೃತ್ವದ ‘ಛತ್ರೋನ್ ಕಿ ಗೂಂಜ್’ ಅಭಿಯಾನದ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟವನ್ನು ವಿಸ್ತರಿಸಲು ಹಾಗೂ ರಾಮ ಮಂದಿರದ ದೇಣಿಗೆ ವಿವಾದವನ್ನು ದೇಶದಾದ್ಯಂತ ತಳಮಟ್ಟಕ್ಕೆ ಕೊಂಡೊಯ್ಯಲು CWC ನಿರ್ಧರಿಸಿದೆ.
‘ನಾವು ಮೂರು–ನಾಲ್ಕು ವಿಷಯಗಳ ಮೇಲೆ ಗಮನ ಹರಿಸಿದ್ದೇವೆ. ಮೊದಲನೆಯದು ಪ್ರಶ್ನೆಪತ್ರಿಕೆ ಸೋರಿಕೆ. ದೇಶದ ಜನರು ನಡೆಸಿದ ಆಂದೋಲನ ಮತ್ತು ಸರಕಾರ ಆ ಆಂದೋಲನವನ್ನು ನಿಭಾಯಿಸಿದ ರೀತಿಯ ಬಗ್ಗೆ ಚರ್ಚಿಸಲಾಯಿತು. ಸಂಸತ್ತಿನ ಮಳೆಗಾಲದ ಅಧಿವೇಶನ ವಿರೋಧ ಪಕ್ಷಗಳಿಗೆ ಯಶಸ್ವಿಯಾಗಿದ್ದು, ಸರಕಾರ ಹಿನ್ನಡೆ ಅನುಭವಿಸಿದೆ ಎಂದು CWC ಗಮನಿಸಿದೆ’ ಎಂದು ವೇಣುಗೋಪಾಲ್ ಹೇಳಿದರು.
ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಪುನರ್ರಚಿಸಲು ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಶಿಕ್ಷಣ ತಜ್ಞರೊಂದಿಗೆ ಕೆಲಸ ಮಾಡಲು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಖರ್ಗೆ ಸೂಚಿಸಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.
‘ಚಂದಾ ಚೋರಿ (ದೇವಾಲಯದ ದೇಣಿಗೆ ಕಳ್ಳತನ) ದೇಶದ ಜನರಲ್ಲಿ ಗಂಭೀರ ಕಳವಳ ಮೂಡಿಸಿರುವ ವಿಷಯ. ಇದು ಜನರ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಜನರನ್ನು ಧ್ರುವೀಕರಿಸಲು ರಾಮ ಮಂದಿರವನ್ನು ಬಳಸಿದವರು ಈಗ ಬೆತ್ತಲಾಗಿದ್ದಾರೆ’ ಎಂದು ಅವರು ಹೇಳಿದರು.
‘ನಾವು ಈ ವಿಷಯವನ್ನು ತಳಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಗ್ರಾಮ ಮತ್ತು ಪಂಚಾಯಿತಿ ಮಟ್ಟದಲ್ಲಿ ಇದನ್ನು ಕೈಗೆತ್ತಿಕೊಳ್ಳುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ (PCCs) ನಿರ್ದೇಶನ ನೀಡಿದ್ದೇವೆ’ ಎಂದರು.
‘ಚೀನೀ ಅತಿಕ್ರಮಣ’ದ ಆರೋಪ
ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ‘ಚೀನೀ ಅತಿಕ್ರಮಣ’ದ ವಿಚಾರದಲ್ಲಿ ಕೇಂದ್ರ ಸರಕಾರ ‘ಶರಣಾಗತಿ ನೀತಿ’ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭೆಯ ಅಸ್ತಿತ್ವದಲ್ಲಿರುವ 543 ಸ್ಥಾನಗಳ ಆಧಾರದ ಮೇಲೆಯೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂಬ ತನ್ನ ಬೇಡಿಕೆಯನ್ನು CWC ಪುನರುಚ್ಚರಿಸಿದೆ.
CWC ಸಭೆಯಲ್ಲಿ ಕಾಂಗ್ರೆಸ್ನ ನಾಲ್ವರು ಮುಖ್ಯಮಂತ್ರಿಗಳಾದ ಎ. ರೇವಂತ್ ರೆಡ್ಡಿ (ತೆಲಂಗಾಣ), ವಿ.ಡಿ. ಸತೀಶನ್ (ಕೇರಳ), ಸುಖವಿಂದರ್ ಸಿಂಗ್ ಸುಖು (ಹಿಮಾಚಲ ಪ್ರದೇಶ) ಮತ್ತು ಡಿ.ಕೆ. ಶಿವಕುಮಾರ್ (ಕರ್ನಾಟಕ) ಉಪಸ್ಥಿತರಿದ್ದರು.






