ನನ್ನ ಅವಮಾನ ಸಹಿಸಿಕೊಳ್ಳುತ್ತೇನೆ, ರೈತರ - ನನ್ನ ಸಮುದಾಯದ ಅವಹೇಳನ ಸಹಿಸಲಾರೆ: ಧನ್ಕರ್
ಜಗದೀಪ್ ಧನ್ಕರ್ | Photo: PTI
ಹೊಸದಿಲ್ಲಿ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತನ್ನನ್ನು ಅನುಕರಣೆ ಮಾಡಿರುವುದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್, ನನ್ನನ್ನು ಅವಮಾನ ಮಾಡಿದರೆ ಸಹಿಸಿಕೊಳ್ಳುತ್ತೇನೆ, ಆದರೆ ನನ್ನ ಹುದ್ದೆ ಮತ್ತು ಸಮುದಾಯಕ್ಕೆ ಅವಮಾನವಾದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
‘‘ಜಗದೀಪ್ ಧನ್ಕರ್ ಗೆ ನೀವು ಎಷ್ಟೇ ಅವಮಾನ ಮಾಡಿದರೂ ನಾನು ಲೆಕ್ಕಿಸುವುದಿಲ್ಲ. ಆದರೆ ಭಾರತದ ಉಪರಾಷ್ಟ್ರಪತಿ, ರೈತ ಸಮುದಾಯ ಮತ್ತು ನನ್ನ ಸಮುದಾಯಕ್ಕೆ ಮಾಡುವ ಅವಮಾನವನ್ನು ನಾನು ಸಹಿಸುವುದಿಲ್ಲ. ನನ್ನ ಹುದ್ದೆಯ ಘನತೆಯನ್ನು ಕಾಪಾಡಲು ನನಗೆ ಸಾಧ್ಯವಾಗದಿದ್ದರೆ ನಾನು ಸಹಿಸುವುದಿಲ್ಲ. ಈ ಸದನದ ಘನತೆಯನ್ನು ರಕ್ಷಿಸುವುದು ನನ್ನ ಕರ್ತವ್ಯ’’ ಎಂದು ಅವರು ಹೇಳಿದರು.
ಸಂಸತ್ನಲ್ಲಿ ಆಗಿರುವ ಅತ್ಯಂತ ಗಂಭೀರ ಭದ್ರತಾ ಲೋಪಕ್ಕೆ ಗೃಹ ಸಚಿವರು ಉತ್ತರ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿರುವುದಕ್ಕಾಗಿ ಸದನದಿಂದ ಅಮಾನತುಗೊಂಡಿರುವ ಸಂಸದರು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಪ್ರತಿಭಟನೆಯ ವೇಳೆ, ತೃಣಮೂಲ ಕಾಂಗ್ರೆಸ್ ಸಂಸದ ಬ್ಯಾನರ್ಜಿ ರಾಜ್ಯಸಭೆಯಲ್ಲಿ ಧನ್ಕರ್ ಹಾವಭಾವವನ್ನು ಅನುಕರಿಸಿದರೆನ್ನಲಾಗಿದೆ. ಅದು ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು. ಈವರೆಗೆ 143 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಖಂಡಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ ಆಗಿರುವ ಧನ್ಕರ್ ಬುಧವಾರ ಹೇಳಿದರು.
‘‘ಪ್ರಧಾನಿಯವರೇ, ಕೆಲವರ ವರ್ತನೆಗಳು ನನ್ನ ಕರ್ತವ್ಯವವನ್ನು ನಿಭಾಯಿಸುವುದರಿಂದ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದರಿಂದ ನನ್ನನ್ನು ತಡೆಯುವುದಿಲ್ಲ ಎಂದು ನಾನು ಹೇಳಿದೆ. ಆ ಮೌಲ್ಯಗಳಿಗೆ ನಾನು ಹೃದಯದಾಳದಿಂದ ಬದ್ಧನಾಗಿದ್ದೇನೆ. ಯಾವುದೇ ಅವಮಾನವು ನನ್ನ ದಾರಿಯನ್ನು ಬದಲಾಯಿಸುವುದಿಲ್ಲ ಎಂದು ನಾನು ಹೇಳಿದೆ’’ ಎಂದರು.
ರಾಷ್ಟ್ರಪತಿ ಅಸಮಾಧಾನ
ಸಂಸತ್ ಭವನದಲ್ಲಿ ಉಪರಾಷ್ಟ್ರಪತಿಗೆ ಆಯಿತೆನ್ನಲಾದ ಅವಮಾನದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಚುನಾಯಿತ ಪ್ರತಿನಿಧಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ, ಅಂಥ ಅಭಿವ್ಯಕ್ತಿಗಳು ಘನತೆ ಮತ್ತು ಸೌಜನ್ಯದ ನಿಯಮಗಳಿಗೆ ಒಳಪಡಬೇಕು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲಘುವಾಗಿ ತೆಗೆದುಕೊಳ್ಳಿ: ಮಮತಾ
ಅನುಕರಣೆ ವಿವಾದವನ್ನು ಲಘುವಾಗಿ ತೆಗೆದುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
‘‘ನಾವು ಪ್ರತಿಯೊಬ್ಬರಿಗೂ ಗೌರವ ಕೊಡುತ್ತೇವೆ. ಇದನ್ನು ಲಘುವಾಗಿ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ಈ ವೀಡಿಯೊ ಮಾಡಿರದಿದ್ದರೆ ನಿಮಗೆ ಅದು ಗೊತ್ತೂ ಆಗುತ್ತಿರಲಿಲ್ಲ’’ ಎಂದು ಹೊಸದಿಲ್ಲಿಯಲ್ಲಿರುವ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನಗಳ ಬಗ್ಗೆ ಪ್ರಧಾನಿ ಜೊತೆ ಮಾತುಕತೆ ನಡೆಸಲು ಅವರು ಹೊಸದಿಲ್ಲಿಗೆ ಬಂದಿದ್ದರು.
ಈ ಕೃತ್ಯಕ್ಕೆ ನಿಮ್ಮ ಬೆಂಬಲವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘‘ಪಶ್ಚಿಮ ಬಂಗಾಳವನ್ನು ಬಿಟ್ಟು ಬೇರೆ ಯಾವ ವಿಷಯಕ್ಕೂ ನಾನು ಪ್ರತಿಕ್ರಿಯಿಸುವುದಿಲ್ಲ’’ ಎಂದು ಮಮತಾ ಹೇಳಿದರು.