ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಭಾರತ-ಪಾಕ್ ಜೊತೆ ಕೆಲಸ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ನಡೆದ ಸಂಘರ್ಷವನ್ನು ಅಂತ್ಯಗೊಳಿಸಲು ಎರಡೂ ದೇಶಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿರುವುದನ್ನು ರವಿವಾರ ಶ್ಲಾಘಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಂಘರ್ಷ ಮುಂದುವರಿದಿದ್ದರೆ ಲಕ್ಷಾಂತರ ಮಂದಿ ಸಾಯುತ್ತಿದ್ದರು. ಪರಸ್ಪರ ದೂರಾಗಿರುವ ಎರಡೂ ದೇಶಗಳೊಂದಿಗಿನ ಮಾತುಕತೆಯನ್ನು ನಾನು ತೀವ್ರಗೊಳಿಸಲಿದ್ದು, ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳೊಂದಿಗೆ ಕೆಲಸ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಶನಿವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಅಮೆರಿಕ ಅಧ್ಯ.ಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರರ ವಿರುದ್ಧ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅಮೆರಿಕದ ಮಧ್ಯಸ್ಥಿಕೆಯ ನಂತರ ಸಮ್ಮತಿಸಿವೆ ಎಂದು ಹೇಳಿದ್ದರು. ಆದರೆ, ಪಾಕಿಸ್ತಾನದೊಂದಿಗಿನ ನೇರ ಸಂಪರ್ಕದ ನಂತರ, ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ ಎಂದು ಭಾರತ ಹೇಳಿತ್ತು.
“ಹಲವಾರು ಜೀವಗಳು ಹಾಗೂ ಆಸ್ತಿಪಾಸ್ತಿಗಳ ಹಾನಿಗೆ ಕಾರಣವಾಗುತ್ತಿದ್ದ ಹಾಲಿ ಸಂಘರ್ಷವನ್ನು ಅಂತ್ಯಗೊಳಿಸಲು ಇದು ಸೂಕ್ತ ಸಮಯ ಎಂಬುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ವಿವೇಕ ಹಾಗೂ ಸ್ಥೈರ್ಯ ಪ್ರದರ್ಶಿಸಿರುವ ಭಾರತ ಮತ್ತು ಪಾಕಿಸ್ತಾನದ ಬಲಿಷ್ಠ ಹಾಗೂ ಎದೆಗುಂದದ ಶಕ್ತಿಶಾಲಿ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಸಂಘರ್ಷದಿಂದಾಗಿ ಲಕ್ಷಾಂತರ ಮಂದಿ ಒಳ್ಳೆಯ ಹಾಗೂ ಅಮಾಯಕ ಜನರು ಸಾವನ್ನಪ್ಪುತ್ತಿದ್ದರು!. ಈ ಚಾರಿತ್ರಿಕ ಹಾಗೂ ವೀರೋಚಿತ ನಿರ್ಧಾರಕ್ಕೆ ತಲುಪುವಲ್ಲಿ ಅಮೆರಿಕ ನಿಮಗೆ ಸಹಾಯ ಮಾಡಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಇದರೊಂದಿಗೆ, ಸಾವಿರಾರು ವರ್ಷಗಳ ಸಮಸ್ಯೆಯಾಗಿರುವ ಕಾಶ್ಮೀರದ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಳ್ಳಲು ಸಾಧ್ಯವೆ ಎಂಬುದರ ಕುರಿತು ನಿಮ್ಮಿಬ್ಬರೊಂದಿಗೂ ಕೆಲಸ ಮಾಡಲು ಬಯಸುತ್ತೇನೆ. ಅತ್ಯುತ್ತಮ ಕೆಲಸ ಮಾಡಿರುವ ಭಾರತ ಮತ್ತು ಪಾಕಿಸ್ತಾನದ ನಾಯಕತ್ವಕ್ಕೆ ದೇವರು ಆಶೀರ್ವದಿಸಲಿ” ಎಂದು ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದಾರೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತವು ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀನರದಲ್ಲಿನ ಭಯೋತ್ಪಾದಕ ಶಿಬಿರಗಳ ವಾಯು ದಾಳಿ ನಡೆಸಿ, ಅವುಗಳನ್ನು ಧ್ವಂಸಗೊಳಿಸಿತ್ತು.







