ಮುಗಿದ ಚಳಿಗಾಲದ ಅಧಿವೇಶನ | ಚಹಾ ಕೂಟದಲ್ಲಿ ವಿಪಕ್ಷ ಸಂಸದರೊಬ್ಬರನ್ನು ಪ್ರಶಂಸಿಸಿ, ನಗೆ ಚಟಾಕಿ ಹಾರಿಸಿದ ಪ್ರಧಾನಿ

Photo Credit : PTI
ಹೊಸದಿಲ್ಲಿ: ಚಳಿಗಾಲದ ಸಂಸತ್ ಅಧಿವೇಶನದ ಬಳಿಕ ಲೋಕಸಭಾಧ್ಯಕ್ಷ ಓಂ ಬಿರ್ಲಾ ಆಯೋಜಿಸಿದ್ದ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷಗಳು ಸದಸ್ಯರೂ ಭಾಗವಹಿಸಿ ಗಮನ ಸೆಳೆದರು.
ಚಳಿಗಾಲದ ಅಧಿವೇಶನದಲ್ಲಿ ಕಾವೇರಿದ ಚರ್ಚೆಯ ಬಳಿಕ, ಅಧಿವೇಶನ ಮುಕ್ತಾಯಗೊಂಡ ಪ್ರಯುಕ್ತ ಲೋಕಸಭಾಧ್ಯಕ್ಷರು ಸಾಂಪ್ರದಾಯಿಕವಾಗಿ ಆಯೋಜಿಸುವ ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರೂ ಭಾಗವಹಿಸಿದ್ದುದು ವಿಶೇಷವಾಗಿತ್ತು.
ಕುತೂಹಲಕರ ಸಂಗತಿಯೆಂದರೆ, ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರೊಂದಿಗೆ ಲಘು ಹಾಸ್ಯದ ಚಟಾಕಿಗಳನ್ನು ಹಾರಿಸಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಸಂಸದರು ಮಾಡಿದ ದೂರೊಂದರ ಕುರಿತು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದೂ ಕಂಡು ಬಂದಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡ ನಿರ್ಧಾರದ ಮೇಲೆ ಲೋಕಸಭಾಧ್ಯಕ್ಷರು ಆಯೋಜಿಸಿದ್ದ ಚಹಾ ಕೂಟದಲ್ಲಿ ಪಾಲ್ಗೊಳ್ಳಲು ಪಕ್ಷ ತೀರ್ಮಾನಿಸಿತು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಬಾರಿಯ ಅಧಿವೇಶನದಲ್ಲಿ ವಿಪಕ್ಷಗಳು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರಿಸಿದರೂ, ಸಭಾಧ್ಯಕ್ಷ ಪೀಠವು ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ನ್ಯಾಯಯುತವಾಗಿ ವರ್ತಿಸಿದ್ದು ಹಾಗೂ ವಿಪಕ್ಷಗಳ ಸಂಸದರಿಗೆ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದು ಚಹಾ ಕೂಟದಲ್ಲಿ ವಿಪಕ್ಷಗಳ ಸಂಸದರು ಪಾಲ್ಗೊಳ್ಳುವ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಎಂದು ಈ ಮೂಲಗಳು ತಿಳಿಸಿವೆ.
ಈ ಚಹಾ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು RSP ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರನ್ನು ಅತ್ಯುತ್ತಮ ಸಂಸದೀಯ ಪಟು ಎಂದು ಪ್ರಶಂಸಿಸಿದರು ಎಂದೂ ಈ ಮೂಲಗಳು ತಿಳಿಸಿವೆ.
ಚಹಾ ಕೂಟದಲ್ಲಿ ನಡೆದ ಸಂವಾದದ ವೇಳೆ ವಿಪಕ್ಷಗಳ ಸದಸ್ಯರು ಅಧಿವೇಶನ ಮತ್ತಷ್ಟು ಸುದೀರ್ಘವಾಗಿರಬೇಕಿತ್ತು ಎಂದು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ, “ನೀವು ಹೆಚ್ಚು ಮಾತನಾಡಿ, ನಿಮ್ಮ ಧ್ವನಿ ದಣಿಯಬಾರದು ಎಂಬುದು ನನ್ನ ಬಯಕೆಯಾಗಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ನಗೆ ಚಟಾಕಿ ಸಿಡಿಸಿದರು ಎನ್ನಲಾಗಿದೆ.
‘ನಿಮಗೆಲ್ಲರಿಗೂ ಮಾತನಾಡಲು ಸಾಕಷ್ಟು ಸಮಯಾವಕಾಶ ದೊರೆಯಿತು ಎಂದು ನಾನು ಭಾವಿಸಿದ್ದೇನೆ” ಎಂದೂ ಅವರು ಹೇಳಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರೊಂದಿಗೂ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಯನಾಡ್ ನ ಆಯುರ್ವೇದ ಔಷಧದ ಕುರಿತು ಅವರ ಬಳಿ ವಿಚಾರಿಸಿದರು ಎನ್ನಲಾಗಿದೆ. ಹಾಗೆಯೇ ಹರ್ಯಾಣ ವಿಧಾನಸಭಾ ಅಧಿವೇಶನದ ಕುರಿತು ಸಂಸದೆ ಸೆಲ್ಜಾ ಕುಮಾರಿ ಅವರನ್ನೂ ಮೋದಿ ವಿಚಾರಿಸಿದರು ಎಂದು ಹೇಳಲಾಗಿದೆ.







