ಸಂಸತ್ತಿನ ಚಳಿಗಾಲದ ಅಧಿವೇಶನ| ಎಸ್ಐಆರ್ ಕುರಿತು ಪ್ರತಿಪಕ್ಷಗಳಿಂದ ಪ್ರತಿಭಟನೆ; ಮೊದಲ ದಿನವೇ ಕಲಾಪ ಮುಂದೂಡಿಕೆ

Photo Credit : PTI
ಹೊಸದಿಲ್ಲಿ,ಡಿ.1: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ವಿವಾದಾತ್ಮಕ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳಿಂದ ನಿರಂತರ ಪ್ರತಿಭಟನೆಗಳಿಂದಾಗಿ ಲೋಕಸಭಾ ಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಚುನಾವಣಾ ಆಯೋಗವು ಆರಂಭಿಸಿರುವ ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳು ಕೆಲಸದ ಒತ್ತಡದಿಂದಾಗಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒಗಳು) ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬೆಟ್ಟು ಮಾಡಿವೆ. ಅಂತಿಮವಾಗಿ ಅಪರಾಹ್ನ 2:20ರ ಸುಮಾರಿಗೆ ದಿನದ ಮಟ್ಟಿಗೆ ಮುಂದೂಡಲ್ಪಡುವ ಮುನ್ನ ಲೋಕಸಭಾ ಕಲಾಪಗಳನ್ನು ಬೆಳಿಗ್ಗೆ ಪ್ರಶ್ನೋತ್ತರ ಅವಧಿಯಲ್ಲಿ ಮತ್ತು ನಂತರ ಮಧ್ಯಾಹ್ನ ಹೀಗೆ ಎರಡು ಬಾರಿ ಮುಂದೂಡಲಾಗಿತ್ತು.
ಪ್ರತಿಪಕ್ಷಗಳ ಹಲವಾರು ಸದಸ್ಯರು ಎಸ್ಐಆರ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಆದರೆ ಈ ಗದ್ದಲದ ನಡುವೆಯೇ ಮಣಿಪುರದಲ್ಲಿ ಜಿಎಸ್ಟಿ ಕಾನೂನಿಗೆ ತಿದ್ದುಪಡಿಗಳ ಅನುಷ್ಠಾನಕ್ಕಾಗಿ ಮಸೂದೆಯನ್ನು ಸಂಕ್ಷಿಪ್ತ ಚರ್ಚೆಯ ಬಳಿಕ ಅಂಗೀಕರಿಸಲಾಯಿತು.
ರಾಜ್ಯವು ರಾಷ್ಟ್ರಪತಿ ಆಡಳಿತದಲ್ಲಿದೆ. ಹೀಗಾಗಿ ಶಾಸನವನ್ನು ಅಂಗೀಕರಿಸಲು ಸಂಸತ್ತು ತನ್ನ ಅಧಿಕಾರವನ್ನು ಬಳಸುತ್ತಿದೆ ಎಂದು ಮಸೂದೆಯನ್ನು ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಪ್ರಶ್ನೋತ್ತರ ವೇಳೆಯ 12 ನಿಮಿಷಗಳ ಅವಧಿಯಲ್ಲಿ ಸೀತಾರಾಮನ್ ಅವರು 2025-26ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಜೊತೆಗೆ ಮೂರು ಮಸೂದೆಗಳನ್ನು ಮಂಡಿಸಿದರು.
ಇವುಗಳಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುವ ಎರಡು ಮಸೂದೆಗಳು ಮತ್ತು ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಸೆಸ್ಗಾಗಿ ಮಸೂದೆ ಸೇರಿವೆ.
ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ-2025 ಹಾಗೂ ಆರೋಗ್ಯ ಭದ್ರತಾ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ-2025 ಈ ಮಸೂದೆಗಳಾಗಿವೆ.







