ಡಿ. 1-19 ಸಂಸತ್ ನ ಚಳಿಗಾಲದ ಅಧಿವೇಶನ

PC : PTI
ಹೊಸದಿಲ್ಲಿ, ನ. 8: ಸಂಸತ್ ನ ಚಳಿಗಾಲದ ಅಧಿವೇಶನವು ಡಿಸೆಂಬರ್ ಒಂದರಿಂದ 19ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಪ್ರಕಟಿಸಿದ್ದಾರೆ.
ಈ ಬಾರಿಯ ಚಳಿಗಾಲದ ಅಧಿವೇಶನ ಕಿರು ಅವಧಿಯದ್ದಾಗಿರುವುದು ಗಮನ ಸೆಳೆದಿದೆ. ಕಳೆದ ವರ್ಷದ ಚಳಿಗಾಲದ ಅಧಿವೇಶನವು ನವೆಂಬರ್ 25ರಿಂದ ಡಿಸೆಂಬರ್ 20ರವರೆಗೆ ನಡೆದಿತ್ತು.
‘‘ಸಂಸತ್ ನ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ ಒಂದರಿಂದ 19ರವರೆಗೆ ನಡೆಸುವ ಸರಕಾರದ ಪ್ರಸ್ತಾವಕ್ಕೆ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ’’ ಎಂಬುದಾಗಿ ರಿಜಿಜು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ರಚನಾತ್ಮಕ ಹಾಗೂ ಅರ್ಥಪೂರ್ಣ ಅಧಿವೇಶನಕ್ಕಾಗಿ ಅವರು ಮನವಿ ಮಾಡಿದ್ದಾರೆ. ‘‘ರಚನಾತ್ಮಕ ಹಾಗೂ ಅರ್ಥಪೂರ್ಣ ಅಧಿವೇಶನವನ್ನು ನಾನು ಎದುರು ನೋಡುತ್ತಿದ್ದೇನೆ. ಅದು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುತ್ತದೆ’’ ಎಂದು ಅವರು ಹೇಳಿದರು.
► ಕಿರು ಅವಧಿಗೆ ಪ್ರತಿಪಕ್ಷ ಆಕ್ಷೇಪ
ಸಂಸತ್ ನ ಚಳಿಗಾಲದ ಅಧಿವೇಶನದ ಅವಧಿಯನ್ನು ಕಿರಿದುಗೊಳಿಸಿರುವುದಕ್ಕೆ ಪ್ರತಿಪಕ್ಷ ಆಕ್ಷೇಪಿಸಿದೆ. ಇದರ ಅರ್ಥ ಸರಕಾರ ಕಡಿಮೆ ಕಲಾಪಗಳನ್ನು ಹೊಂದಿದೆ ಮತ್ತು ಯಾವುದೇ ಪ್ರತಿಪಕ್ಷ ಪ್ರಾಯೋಜಿತ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿದೆ ಎಂದು ಅದು ಹೇಳಿದೆ.
‘‘ಸಂಸತ್ ನ ಚಳಿಗಾಲದ ಅಧಿವೇಶನ ಡಿಸೆಂಬರ್ ಒಂದರಿಂದ 19ರವರೆಗೆ ಎಂಬುದಾಗಿ ಪ್ರಕಟಿಸಲಾಗಿದೆ. ಅಧಿವೇಶನವನ್ನು ಅಸಹಜವೆಂಬಂತೆ ವಿಳಂಬಿಸಲಾಗಿದೆ ಮತ್ತು ಕಿರಿದುಗೊಳಿಸಲಾಗಿದೆ. ಈ ಅಧಿವೇಶನದಲ್ಲಿ ಕೇವಲ 15 ಕೆಲಸದ ದಿನಗಳಿವೆ. ಸರಕಾರ ನೀಡುತ್ತಿರುವ ಸಂದೇಶ ಏನು? ಸರಕಾರದ ಬಳಿ ಯಾವುದೇ ಕಲಾಪಗಳಿಲ್ಲ, ಅಂಗೀಕರಿಸಲು ಯಾವುದೇ ಮಸೂದೆಗಳಿಲ್ಲ ಮತ್ತು ಯಾವುದೇ ಚರ್ಚೆಗೆ ಅವಕಾಶವಿಲ್ಲ ಎನ್ನುವುದು ಸಷ್ಟ’’ ಎಂದು ಕಾಂಗ್ರೆಸ್ನ ರಾಜ್ಯಸಭಾ ಮುಖ್ಯ ಸಚೇತಕ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡದವರು ತೀವ್ರ ಸ್ವರೂಪದ ‘ಸಂಸತ್ ಭಯ’ದಿಂದ ಬಳಲುತ್ತಿದ್ದಾರೆ. ಅಂದರೆ ಸಂಸತ್ತನ್ನು ಎದುರಿಸುವ ಆಘಾತಕಾರಿ ಭಯ ಅವರನ್ನು ಆವರಿಸಿದೆ. 15 ದಿನಗಳ ಅಧಿವೇಶನವು ನಕಾರಾತ್ಮಕ ದಾಖಲೆಯಾಗಿದೆ’’ ಎಂದು ತೃಣಮೂಲ ಕಾಂಗ್ರೆಸ್ ನ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯನ್ ಹೇಳಿದ್ದಾರೆ.







