ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ: ಬಾವಿಯಲ್ಲಿ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಕರೌಲಿ (ರಾಜಸ್ಥಾನ): ಅಪಹರಣಕ್ಕೀಡಾಗಿ, ಆ್ಯಸಿಡ್ ದಾಳಿಗೊಳಗಾಗಿದ್ದ 18 ವರ್ಷದ ಯುವತಿಯೊಬ್ಬಳ ಮೃತದೇಹವು ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ಕರೌಲಿ ಜಿಲ್ಲೆಯಲ್ಲಿ ನಡೆದಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಇಟ್ಟಿದ್ದ ಆಸ್ಪತ್ರೆಯ ಎದುರು ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಸೇರಿದಂತೆ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಹಾಗೂ ಯುವತಿಯ ಕುಟುಂಬದ ಸದಸ್ಯರು ಧರಣಿ ನಡೆಸಿದರು.
ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು, ರೂ. 50 ಲಕ್ಷ ಪರಿಹಾರ ನೀಡಬೇಕು ಹಾಗೂ ಸರ್ಕಾರಿ ಉದ್ಯೋಗ ಒದಗಿಸಬೇಕು ಎಂದು ಯುವತಿಯ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ತೋಡಾಭೀಮ್ ಪ್ರದೇಶದ ಮೋಹನ್ಪುರ ಗ್ರಾಮದ ನಿವಾಸಿಯಾದ ಯುವತಿಯು ಬುಧವಾರ ನಾಪತ್ತೆಯಾಗಿದ್ದಳು. ತನ್ನ ಮಗಳನ್ನು ಅಪಹರಿಸಿ, ನಂತರ ಹತ್ಯೆಗೈಯ್ಯಲಾಗಿದೆ ಎಂದು ಆಕೆಯ ಕುಟುಂಬದ ಸದಸ್ಯರು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ನಡುಟಿ ಪೊಲೀಸ್ ಠಾಣಾಧಿಕಾರಿ ಬಾಬು ಲಾಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಮೀನಾ, ಯುವತಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ನಂತರ ಹತ್ಯೆಗೈಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.





