ಗಂಡನ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಮಹಿಳೆ; ಉತ್ತರ ಪ್ರದೇಶದಲ್ಲಿ ನಡೆದ ಭೀಕರ ಘಟನೆಯ ವಿಡಿಯೋ ವೈರಲ್

Screengrab:X/@iamharunkhan
ಲಕ್ನೋ: ತನ್ನ ಗಂಡನ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಆತನನ್ನು ಸಾಯಿಸಿದ ಆರೋಪದ ಮೇಲೆ ಶಹಜಾನಪುರದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಊಟದ ವಿಚಾರದಲ್ಲಿ ಉಂಟಾದ ಗಲಾಟೆ ಕೊಲೆಯಲ್ಲಿ ಪರ್ಯವಸಾನಗೊಂಡಿದೆ.
ಮೃತ ವ್ಯಕ್ತಿಯನ್ನು 40 ವರ್ಷದ ಸತ್ಯಪಾಲ್ ಎಂದು ಗುರುತಿಸಲಾಗಿದ್ದು ಕ್ರೀಡಾಂಗಣದ ಕಾವಲುಗಾರನಾಗಿ ಆತ ಕೆಲಸ ಮಾಡುತ್ತಿದ್ದ.
ಪೊಲೀಸರು ಆಗಮಿಸಿದಾಗ ಮಹಿಳೆ ತನ್ನ ಗಂಡನ ಮೃತದೇಹದ ಮೇಲೆ ಕುಳಿತು ತಲೆಯನ್ನು ಇಟ್ಟಿಗೆಯಿಂದ ಜಜ್ಜುತ್ತಿದ್ದುದು ಕಂಡು ಬಂತು. ಈ ಘಟನೆಯ ವೀಡಿಯೋ ಮತ್ತು ಫೋಟೋ ವೈರಲ್ ಆಗಿದೆ.
ಆರೋಪಿಯನ್ನು 37 ವರ್ಷದ ಗಾಯತ್ರಿ ದೇವಿ ಎಂದು ಗುರುತಿಸಲಾಗಿದ್ದು ಆಕೆ ಮಾನಸಿಕ ಅಸ್ವಸ್ಥೆ ಎಂದು ಆಕೆಯ ಸಂಬಂಧಿಕರು ಹೇಳಿದರೂ ಅದಕ್ಕೆ ಯಾವುದೇ ಪುರಾವೆಯನ್ನು ಅವರು ಒದಗಿಸಿಲ್ಲ.
ದಂಪತಿಗೆ 18 ವರ್ಷ ಹಿಂದೆ ವಿವಾಹವಾಗಿದ್ದು, ಗಂಡ ಕುಡುಕನಾಗಿದ್ದ ಎಂದು ತಿಳಿದು ಬಂದಿದ್ದು ಪ್ರತಿ ದಿನ ಗಾಯತ್ರಿ ಜೊತೆ ಜಗಳವಾಡುತ್ತಿದ್ದ. ಮಕ್ಕಳು ಅಜ್ಜಿಯ ಜೊತೆಗೆ ಬೇರೆ ಮನೆಯಲ್ಲಿ ವಾಸವಾಗಿದ್ದರು.
ಗುರುವಾರ ಪೊಲೀಸರು ದಂಪತಿಯ ಮನೆಯೆದುರು ಹಾದು ಹೋಗುತ್ತಿರುವಾಗ ಅಲ್ಲಿ ಜನ ಸೇರಿದ್ದನ್ನು ಗಮನಿಸಿ ಮನೆಹೊರಗಿನ ದೃಶ್ಯವನ್ನು ಕಂಡು ದಂಗಾಗಿದ್ದರು, ಅಲ್ಲಿರುವ ಯಾರೂ ಗಾಯತ್ರಿಯನ್ನು ತಡೆಯಲು ಹೋಗಿಲ್ಲವೆಂದು ತಿಳಿದು ಬಂದಿದೆ.







