ಮಹಿಳೆ ಅಳುತ್ತಿದ್ದಳು ಎಂಬ ಕಾರಣಕ್ಕೆ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ : ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ (Photo: PTI)
ಹೊಸದಿಲ್ಲಿ: ಮಹಿಳೆಯೋರ್ವಳು ಅಳುತ್ತಿದ್ದಳು ಎಂಬ ಒಂದೇ ಒಂದು ಕಾರಣಕ್ಕೆ ಅದನ್ನು ವರದಕ್ಷಿಣೆ ಕಿರುಕುಳ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿ ಮತ್ತು ಆತನ ಕುಟುಂಸ್ಥರನ್ನು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಡಿಸೆಂಬರ್ 2010ರಲ್ಲಿ ವಿವಾಹವಾದ ಮಹಿಳೆ ತನ್ನ ಪತಿ ಮತ್ತು ಅತ್ತೆಯಿಂದ ವರಕ್ಷಿಣೆ ಕಿರುಕುಳವನ್ನು ಎದುರಿಸಿದರು. ಮದುವೆಗೆ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಆ ಬಳಿಕ ಪತಿ ಮತ್ತು ಅತ್ತೆ ಬೈಕ್, ನಗದು ಮತ್ತು ಚಿನ್ನಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರು ಹೆಣ್ಣು ಮಕ್ಕಳ ತಾಯಿಯಾದ ಮಹಿಳೆ 2014ರ ಮಾರ್ಚ್ನಲ್ಲಿ ಮೃತಪಟ್ಟಿದ್ದರು.
ಮೃತಳ ಸಹೋದರಿಯ ಹೇಳಿಕೆಯನ್ನು ಸೆಕ್ಷನ್ 161 ಸಿಆರ್ ಪಿಸಿ ಅಡಿಯಲ್ಲಿ ದಾಖಲಿಸಲಾಗಿತ್ತು. ಅದರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಸಹೋದರಿಗೆ ಕರೆ ಮಾಡಿದಾಗ ಆಕೆ ಅಳುತ್ತಿರುವುದನ್ನು ನೋಡಿರುವುದಾಗಿ ಹೇಳಲಾಗಿತ್ತು.
ಆದರೆ, ಮೃತರು ಅಳುತ್ತಿದ್ದ ಮಾತ್ರಕ್ಕೆ ವರದಕ್ಷಿಣೆ ಕಿರುಕುಳದ ಯಾವುದೇ ಪುರಾವೆ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಮಹಿಳೆಯ ಸಾವು ನ್ಯುಮೋನಿಯಾದಿಂದ ಸಂಭವಿಸಿದೆ ಎಂದು ಹೇಳಿತ್ತು. ಮರಣೋತ್ತರ ಪರೀಕ್ಷೆ ವರದಿಯು ಸಾವಿಗೆ ಕ್ರೌರ್ಯವಲ್ಲ, ನ್ಯುಮೋನಿಯಾ ಕಾರಣ ಎಂದು ಹೇಳಿತ್ತು.







